ಧರ್ಮಶಾಲಾ: ಐಪಿಎಲ್ ಯಶಸ್ಸಿನಿಂದ ಪ್ರೇರೆಪಿತವಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಈಗ ಕ್ರಿಕೆಟ್ ಪ್ರಿಯರಿಗಾಗಿ ಹೊಸ ಟಿ20ಯನ್ನು ಪರಿಚಯಿಸುತ್ತಿದೆ. ಮುಂಬರುವ ಸೆಪ್ಟೆಂಬರ್ನಲ್ಲಿ ವಿದೇಶಗಳಲ್ಲಿ ಮಿನಿ ಐಪಿಎಲ್ ನಡೆಸಲು ಬಿಸಿಸಿಐ ನಿರ್ಧರಿಸಿದೆ.
ಇಂದು ಧರ್ಮಶಾಲಾದಲ್ಲಿ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿಯ ಸಮಾರೋಪ ಸಭೆಯಲ್ಲಿ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರು, ಬಿಸಿಸಿಐ ವಿದೇಶಗಳಲ್ಲಿ 8 ತಂಡಗಳ ಮಿನಿ ಐಪಿಎಲ್ ಪಂದ್ಯ ಆಯೋಜಿಸಲಿದೆ ಎಂದರು.
ಇದೊಂದು ಚುಟುಕು ಪಂದ್ಯಾವಳಿಯಾಗಿದ್ದು, ಇದರಲ್ಲಿ ಕಡಿಮೆ ತಂಡಗಳು ಭಾಗವಹಿಸುತ್ತವೆ ಮತ್ತು ಎರಡು ವಾರಗಳಲ್ಲೇ ಈ ಪಂದ್ಯಾವಳಿ ಮುಕ್ತಾಯವಾಗಲಿದೆ ಎಂದು ಠಾಕೂರ್ ತಿಳಿಸಿದರು.
ಕಳೆದ ವರ್ಷ ನಡೆದ ಚಾಂಪಿಯನ್ಸ್ ಲೀಗ್ ಟಿ20ಯನ್ನು ಕೈಬಿಟ್ಟು ಅದರ ಬದಲು ಮಿನಿ ಐಪಿಎಲ್ ಆಯೋಜನೆಗೆ ಬಿಸಿಸಿಐ ನಿರ್ಧರಿಸಿದೆ.
ಕಳೆದ ವರ್ಷ ಕೂಡ ಬಿಸಿಸಿಐ ಮಿನಿ ಐಪಿಎಲ್ ನಡೆಸುವ ಕುರಿತು ಚಿಂತನೆ ನಡೆಸಿತ್ತು. ಆದರೆ ಇದಕ್ಕೆ ಹಲವರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈ ಬಿಡಲಾಗಿತ್ತು.
Comments are closed.