ಮನೋರಂಜನೆ

ಚಾಕಲೇಟ್‌ ಹುಡುಗಿಯ ಪಿಸುಪಿಸು ಮಾತುಗಳು!

Pinterest LinkedIn Tumblr

Sheena-Teluguನೀನು ಅದು ಯಾವ ಗಳಿಗೆಯಲ್ಲಿ ನನಗೆ “ಚಂದು’ ಎಂದು ಹೆಸರಿಟ್ಟೆಯೋ ಗೊತ್ತಿಲ್ಲ. ಬಹುಶಃ ಅದು ರಾಜಯೋಗದಂತೆ ಪ್ರೇಮ ಯೋಗವೇ ಇರಬೇಕು. ಆ ಕ್ಷಣವೇ ನನ್ನೆದೆಯೊಳಗೆ ಆನಂದದ ಭಾಷ್ಪ ಅರಳಿ ಉಯ್ನಾಲೆಯಾಡಿ ನಲೆದಿತ್ತು. ನಿನ್ನ ಸೌಮ್ಯ ಸಾಂಗತ್ಯ ಬರುಬರುತ್ತ ಪ್ರೀತಿಯ ಬಳ್ಳಿಯನ್ನು ಚಿಗುರಿಸಿ ಒಂದೇ ದಿನದಲ್ಲಿ ಬೆಳೆದು ಹಸಿರೊಡೆಯುವಂತೆ ಮಾಡಿದೆ. ಹೂವೊಂದು ಅರಳಿ ಮುಡಿಯೇರುವ ಕಾತರದಲ್ಲಿದೆ. ನನ್ನ ಪ್ರತಿ ಮಾತಿಗೂ ಬಿರಿವ ನಿನ್ನ ತುಟಿಗಳಲ್ಲಿ ಯಾವ ಶಕ್ತಿ ಅಡಗಿದೆಯೋ? ನಿನ್ನ ನಗೆಮಿಂಚು ಕಂಡಾಗಲೆಲ್ಲ ಹೊಸದೊಂದು ಚೈತನ್ಯ ಮೈಮನ ಸೇರಿ ಪುಟಿಯುತ್ತದೆ. ಆ ನಿನ್ನ ತೇಜಪುಂಜ ಕಣ್ಣುಗಳಲ್ಲಿ ನನ್ನ ಪ್ರತಿಬಿಂಬ ನೋಡದೆ ನನಗೆ ದಿನ ಮುಗಿವ ಅರಿವು ಇರದು. ನಾನು, ನಿನಗೆ ಮತ್ತು ನಿನ್ನ ಪ್ರೀತಿಗೆ ತಕ್ಕವನೇ? ಎಂಬ ಮುಜುಗರ ಒಮ್ಮೊಮ್ಮೆ ನನ್ನನ್ನು ಕಾಡಿ ಹಿಂಜರಿಕೆ ಉಂಟಾದಾಗ ನಿನ್ನ ಸಮಾನ ಮನಸ್ಕ ನಿಸ್ವಾರ್ಥ ಚಿಂತನೆಯ ಲಹರಿ ನನ್ನ ಹಿಂಜರಿಕೆಯನ್ನು ಹಿಂದೆ ತಳ್ಳುತ್ತದೆ. ನನ್ನನ್ನು ತಬ್ಬಿ ನಮ್ಮಿಬ್ಬರ ಪ್ರೀತಿಗೆ ನೀ ಕೊಡುವ ಸ್ಪಷ್ಟನೆಗಳಿಗೆ ನಾ ಸೋಲದೇ ಇರಲಾರೆನು. ಹೌದು ನೀ ನನ್ನ ಅಂಜಲಿ, ಪ್ರೇಮಾಂಜಲಿ! ಎಂದು ಭಾವಪರವಶವಾದ ಹೃದಯದ ಎರಡು ನೆಮ್ಮದಿಯ ಕಂಬನಿಗಳನ್ನು ಹೊರಹಾಕುತ್ತಿತ್ತು.

ಒಂದು ದಿನ ನೀನು ಚಾಕಲೇಟ್‌ ಬಣ್ಣದ ಚೂಡಿ ಧರಿಸಿ ಕಾಲೇಜು ಕ್ಯಾಂಪಸ್ಸಿನೊಳಗೆ ಕಾಲಿಟ್ಟಾಗ ಆ ನಿನ್ನ ಸಹಜ ಸೌಂದರ್ಯ ಮೆಲ್ಲಗೆ ನನ್ನ ಮೇಲೆ ಹಿತವಾಗಿ ದಾಳಿ ಮಾಡಿತ್ತು. ಆ ನಿನ್ನ ಬ್ರಹ್ಮ, ನಿಸರ್ಗದ ಹೂರಾಶಿಗಳನ್ನೆಲ್ಲ ಹಿಂಡಿ ನಿನ್ನ ಸೊಬಗಿಗೆ ತೀಡಿರಬೇಕು ಎನಿಸಿತು, ಅದೆಷ್ಟು ಮುದ್ದು ಮು¨ªಾಗಿ ಕಾಣುತ್ತಿದ್ದೆ. ನನ್ನ ಬೊಗಸೆಯೊಳಗೆ ನಿನ್ನ ಮುಖಾರವಿಂದ ಹಿಡಿದು ಮಗುವಿನಂತೆ ಮನಸಾರೆ ಮುದ್ದಿಸಬೇಕೆನಿಸುತ್ತಿತ್ತು. ಅದೇ ತರಹದ ಶರ್ಟನ್ನು ಹುಡುಕಿ ಪೇಟೆಯ ಎಲ್ಲ ಬಟ್ಟೆ ಮಳಿಗೆಗಳನ್ನು ಸುತ್ತಿ ಸುತ್ತಿ ಸುಸ್ತಾಗಿದ್ದೆ. ಅದು ಸಿಗಲಿಲ್ಲವೆಂದು ಬೇಜಾರಿನಲ್ಲಿ¨ªಾಗ ನೀನಿಟ್ಟ ಹೂಮುತ್ತು ಆ ಬೇಜಾರನ್ನು ದೂರ ಮಾಡಿತ್ತು. ನಾನಿರುವವರೆಗೂ ನಿನ್ನ ಮುಖದಲ್ಲಿ ಸೋಲಿನ ಕಳೆಬಾರದಿರಲಿ ಎನ್ನುವ ಆ ನಿನ್ನ ಮುದ್ದುತನ ನನಗಿಷ್ಟ.

“ಸ್ವಲ್ಪ ಸುಮ್ಮನೆ ಕುಳಿತುಕೋ. ಅದೆಷ್ಟು ಮಾತನಾಡುತ್ತೀಯಾ?’ ಎಂದು ನನ್ನ ಮಾತುಗಳನ್ನು ತಡೆದು ನನ್ನ ಹೆಗಲಿಗೆ ಒರಗಿ ಕುಳಿತುಬಿಡುತ್ತಿದ್ದೆ. ಆ ಪಾರ್ಕಿನ ಸುತ್ತ ಆವರಿಸಿದ ಮೌನದೊಳಗೆ ಒಮ್ಮೊಮ್ಮೆ ನಾವಿಬ್ಬರೂ ಕಳೆದು ಹೋಗುತ್ತಿದ್ದೆವು. ನಾನು ಹತ್ತು ಮಾತನಾಡುವುದಕ್ಕೂ ನೀನು ಒಂದು ಮಾತನಾಡುವುದಕ್ಕೂ ಸರಿಸಮವಾಗುತ್ತಿತ್ತು. ಮಾತನಾಡುವುದಕ್ಕೆ ಏನೂ ಇರದಿದ್ದರೂ, ‘ಮತ್ತೇನು? ಮತ್ತೇನು?’ ಎಂದಾಗ ‘ನೀನೇ ಹೇಳು, ನೀನೇ ಹೇಳು’ ಎಂದು ಮಾತಿಗಾಗಿ ಪರಿತಪಿಸುವ ಪೀಕಲಾಟ ಅದೆಷ್ಟು ಮಧುರ ವೆನಿಸುತ್ತಿತ್ತು. ತಾಸುಗಟ್ಟಲೇ ಮಾತನಾಡಿದರೂ ಇವೆರಡೇ ಪದಗಳು ಮತ್ತೆ ಮತ್ತೆ ಮರುಕಳಿಸುತ್ತಿದ್ದವು. ಅದರ ಜೊತೆಗೆ ಚಿಂತೆಯನ್ನು ಚಿಂದಿ ಮಾಡೋ ನಿನ್ನ ಚೆಂದದ ನಗು.

ಇಷ್ಟೆಲ್ಲಾ ಹೇಳಿ ನಿನ್ನ ಪಿಸುಮಾತುಗಳ ಬಗ್ಗೆ ಹೇಳದಿದ್ದರೆ ಹೇಗೆ? ನಿನ್ನ ಆ ಮಲ್ಲಿಗೆಯ ಪಿಸುಮಾತುಗಳು ಭಾವನಾ ಲೋಕದ ಸಾರ ಭಾವನೆಗಳನ್ನು ಒಂದೊಂದಾಗಿ ನನ್ನೆದೆಯೊಳಗೆ ಇಳಿದು ಬಿಡುತ್ತವೆ. ನಾನು ಜೋರಾಗಿ ನಕ್ಕಾಗ, ತುಸು ಜೋರಾಗಿ ಮಾತನಾಡಿದಾಗ, ನನ್ನ ಕೆನ್ನೆಗೆ ಮೆಲ್ಲನೆ ತಟ್ಟಿ, ‘ಉಶ್‌! ಸ್ವಲ್ಪ ನಿಧಾನವಾಗಿ ಮಾತಾಡು, ಎಂದು ಎಚ್ಚರಿಸುವ ಆ ಪಿಸುಮಾತುಗಳು ತುಂಬಾ ತುಂಬಾ ಹಿತವಾಗಿ ಮನಸ್ಸಿಗೆ ತಟ್ಟುತ್ತವೆ. ಆ ನಿನ್ನ ಪಿಸುಮಾತುಗಳು ನನಗಲ್ಲದೆ ಸೃಷ್ಟಿಯ ಯಾವ ಚರಾಚರಗಳಿಗೂ ಕೇಳಿಸುತ್ತಿರಲಿಲ್ಲವೇನೋ ಎನ್ನುವಷ್ಟು ಗೌಪ್ಯತೆ ಕಾಪಾಡಿಕೊಳ್ಳುತ್ತಿದ್ದವು.

ನೆನಪಿಸಿಕೊಂಡರೆ ಈಗಲೂ ಅವು ಹೃದಯಾಳದಲ್ಲಿ ಮೆಲ್ಲನೆ ಉಲಿಯುತ್ತಿರುತ್ತವೆ. ಅನುರಾಗ ಅರಳಿ ಪ್ರೀತಿಯ ಸುಮ ಬದುಕಿನುದ್ದಕ್ಕೂ ಜೊತೆಯಾದಾಗ ಆ ನಿನ್ನ ಹೂಬಿರಿವ ಮಾತುಗಳು ಎಂದೆಂದೂ ನಿಲ್ಲದಿರಲಿ. ಪ್ರತಿನಿತ್ಯ ನಿನ್ನ ನೆನಪಿಲ್ಲದೆ ಉಸಿರಾಡಲು ಈ ಉಸಿರಿಗೆ ಗೊತ್ತಿಲ್ಲ. ಮೈ ಮನಸ್ಸುಗಳಲ್ಲಿ ನಿನ್ನನ್ನೇ ತುಂಬಿಕೊಂಡಿದ್ದೇನೆ. ಮತ್ತೂಮ್ಮೆ ನನ್ನೆದೆಗೆ ತುಸು ಕಿವಿಗೊಟ್ಟು ಆಲಿಸು ಅಲ್ಲಿ ನಿನ್ನದೇ ಪಿಸುಮಾತುಗಳ ಗ್ಯಾಲರಿ. ನಗೆಮಿಂಚಿನ ಲಹರಿ.
ಚಂದ್ರು ಹಿರೇಮಠ ಮುಧೋಳ
-ಉದಯವಾಣಿ

Write A Comment