ಮನೋರಂಜನೆ

ಐಸಿಸಿ ಟ್ವೆಂಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಮಾ.15ಕ್ಕೆ ಭಾರತದ ಅಭಿಯಾನ ಆರಂಭ, ಮಾ.19ಕ್ಕೆ ಪಾಕ್ ಎದುರಾಳಿ

Pinterest LinkedIn Tumblr

Mumbai: Cricketers Virat Kohli, Ajinkya Rahane and Shikhar Dhawan pose with the trophy during a press conference to announce the schedule of ICC World cup Twenty20 2016 in Mumbai on Friday. PTI Photo by Shashank Parade (PTI12_11_2015_000214B)

ಮುಂಬೈ, ಡಿ.12: ಭಾರತದ ಆತಿಥ್ಯದಲ್ಲಿ ಮೊದಲ ಬಾರಿ ನಡೆಯುತ್ತಿರುವ ಆರನೆ ಆವೃತ್ತಿಯ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಶುಕ್ರವಾರ ಪ್ರಕಟಿಸಿದೆ.

ಟ್ವೆಂಟಿ-20 ವಿಶ್ವಕಪ್ ಟೂರ್ನಿಯು 2016ರ ಮಾ.8 ರಿಂದ ಎಪ್ರಿಲ್ 3ರ ತನಕ ಭಾರತದ 8 ತಾಣಗಳಲ್ಲಿ ನಡೆಯಲಿದ್ದು, ಕೋಲ್ಕತಾದ ಐತಿಹಾಸಿಕ ಈಡನ್‌ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಭಾರತೀಯ ಕ್ರಿಕೆಟ್ ತಂಡ ಮಾ.15 ರಂದು ನ್ಯೂಝಿಲೆಂಡ್ ತಂಡವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಮಾ.19 ರಂದು ಧರ್ಮಶಾಲಾದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. 2016ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಒಟ್ಟು 58 ಪಂದ್ಯಗಳಿವೆ. ಪುರುಷರ ತಂಡ 35 ಹಾಗೂ ಮಹಿಳಾ ತಂಡ 23 ಪಂದ್ಯಗಳನ್ನು ಆಡುತ್ತವೆೆ. 27 ದಿನಗಳ ಕಾಲ ಬೆಂಗಳೂರು, ಚೆನ್ನೈ, ಧರ್ಮಶಾಲಾ, ಕೋಲ್ಕತಾ, ಮೊಹಾಲಿ, ಮುಂಬೈ, ನಾಗ್ಪುರ ಹಾಗೂ ಹೊಸದಿಲ್ಲಿಯಲ್ಲಿ ಪಂದ್ಯಗಳು ನಡೆಯಲಿವೆ.

ಕ್ರಮವಾಗಿ ಮಾ.30 ಹಾಗೂ 31 ರಂದು ಹೊಸದಿಲ್ಲಿ ಹಾಗೂ ಮುಂಬೈನಲ್ಲಿ ಸೆಮಿಫೈನಲ್ ಪಂದ್ಯಗಳು ನಡೆಯುತ್ತವೆ. ಎ.3 ರಂದು ಕೋಲ್ಕತಾದಲ್ಲಿ ಫೈನಲ್ ಪಂದ್ಯಗಳು ನಡೆಯುತ್ತವೆ. ಒಂದು ವೇಳೆ ಪಾಕಿಸ್ತಾನ ಸೆಮಿಫೈನಲ್‌ಗೆ ತೇರ್ಗಡೆಯಾದರೆ, ಎರಡನೆ ಸೆಮಿಫೈನಲ್ ಮುಂಬೈ ಬದಲಿಗೆ ಹೊಸದಿಲ್ಲಿಯಲ್ಲಿ ನಡೆಯಲಿದೆ. ಪಾಕ್ ಭದ್ರತಾ ಕಾರಣದಿಂದಾಗಿ ಮುಂಬೈನಲ್ಲಿ ಆಡಲು ನಿರಾಕರಿಸುತ್ತಿದೆ.

2016ರ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 5.6 ಮಿಲಿಯನ್ ಡಾಲರ್ ಬಹುಮಾನ ಮೊತ್ತ ನಿಗದಿಪಡಿಸಲಾಗಿದ್ದು, ಇದು 2014ರ ಟೂರ್ನಿಗಿಂತ ಶೇ.86ರಷ್ಟು ಅಧಿಕ ಮೊತ್ತವಾಗಿದೆ. ಮಹಿಳಾ ವಿಶ್ವಕಪ್ ಟೂರ್ನಿಯ ಬಹುಮಾನ ಮೊತ್ತ 400,000 ಡಾಲರ್ ಆಗಿದೆ. ಇದು ಮೊದಲ ಆವೃತ್ತಿಗಿಂತ ಗರಿಷ್ಠ ಮೊತ್ತವಾಗಿದೆ.

ಪುರುಷರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ಆಡುವ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳಿರುತ್ತವೆ. ಗ್ರೂಪ್ ವಿನ್ನರ್‌ಗಳು ಮಾ.16 ರಿಂದ ಆರಂಭವಾಗಲಿರುವ ಎರಡನೆ ಹಂತ ಸೂಪರ್-10ರಲ್ಲಿ ಆಡುತ್ತವೆ.

ಎರಡನೆ ಸುತ್ತು ಸೂಪರ್-10 ಹಂತದಲ್ಲಿ ಐದು ತಂಡಗಳ ಎರಡು ಗುಂಪುಗಳಿರುತ್ತವೆ. ಎರಡನೆ ಸುತ್ತಿನಲ್ಲಿ ಎರಡೂ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ತಲುಪುತ್ತವೆ. ಮಹಿಳೆಯರ ವಿಭಾಗದಲ್ಲೂ 10 ತಂಡಗಳನ್ನು 2 ಗುಂಪುಗಳಾಗಿ ವಿಭಜಿಸಲಾಗಿದ್ದು, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ತಲುಪುತ್ತವೆ.

ಪುರುಷರ ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳು ನಾಗ್ಪುರದಲ್ಲಿ ಮಾ.8 ರಂದು ಆರಂಭವಾಗಲಿದೆ. ಬಾಂಗ್ಲಾದೇಶ, ಹಾಲೆಂಡ್, ಐರ್ಲೆಂಡ್ ಹಾಗೂ ಒಮನ್(ಎ ಗುಂಪು) ಹಾಗೂ ಝಿಂಬಾಬ್ವೆ, ಸ್ಕಾಟ್ಲೆಂಡ್, ಹಾಂಕಾಂಗ್ ಹಾಗೂ ಅಫ್ಘಾನಿಸ್ತಾನ(ಬಿ ಗುಂಪು) ಮಾ.13ರ ತನಕ ಪಂದ್ಯಗಳನ್ನು ಆಡುತ್ತವೆ. ಗ್ರೂಪ್ ವಿಜೇತ ತಂಡಗಳು ಆಸ್ಟ್ರೇಲಿಯ, ಇಂಗ್ಲೆಂಡ್, ನ್ಯೂಝಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕ, ಶ್ರೀಲಂಕಾ, ವೆಸ್ಟ್‌ಇಂಡೀಸ್ ಹಾಗೂ ಭಾರತ ತಂಡವನ್ನು ಸೇರಿಕೊಳ್ಳುತ್ತವೆ. 2014ರ ಆವೃತ್ತಿಯ ವಿಶ್ವಕಪ್‌ನಲ್ಲಿ ರನ್ನರ್ಸ್‌-ಅಪ್ ಆಗಿರುವ ಭಾರತ ತಂಡ ಪಾಕಿಸ್ತಾನ, ಆಸ್ಟ್ರೇಲಿಯ, ನ್ಯೂಝಿಲೆಂಡ್ ಹಾಗೂ ‘ಎ’ ಗುಂಪಿನ ವಿನ್ನರ್ ತಂಡದೊಂದಿಗೆ ಗ್ರೂಪ್-1ರಲ್ಲಿ ಸ್ಥಾನ ಪಡೆದಿದೆ. ಹಾಲಿ ಚಾಂಪಿಯನ್ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕ, ವೆಸ್ಟ್‌ಇಂಡೀಸ್, ಇಂಗ್ಲೆಂಡ್ ಹಾಗೂ ಗ್ರೂಪ್ ‘ಬಿ’ ವಿಜೇತ ತಂಡದೊಂದಿಗೆ ಗ್ರೂಪ್-2ರಲ್ಲಿ ಸ್ಥಾನ ಪಡೆದಿದೆ. ‘‘ಭಾರತದಲ್ಲಿ ಕ್ರಿಕೆಟ್‌ಗೆ ಮಹತ್ವದ ಸ್ಥಾನಮಾನವಿದೆ. ಭಾರತ ಈಗಾಗಲೇ 1987, 1996 ಹಾಗೂ 2011ರಲ್ಲಿ ಯಶಸ್ವಿಯಾಗಿ ಐಸಿಸಿ ವಿಶ್ವಕಪ್ ಟೂರ್ನಿಗಳನ್ನು ಆಯೋಜಿಸಿದ್ದು, ಮುಂಬರುವ ಟ್ವೆಂಟಿ-20 ಟೂರ್ನಿಯೂ ಯಶಸ್ಸು ಸಾಧಿಸುವ ವಿಶ್ವಾಸ ನನಗಿದೆ. ಟೂರ್ನಿಯು ಸ್ಮರಣೀಯವಾಗಿರಲು ಐಸಿಸಿ ಹಾಗೂ ಬಿಸಿಸಿಐ ಸಂಪೂರ್ಣ ಬದ್ಧವಾಗಿವೆ. ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ವಿಶ್ವದ ಎಲ್ಲ ಕ್ರಿಕೆಟ್ ಅಭಿಮಾನಿಗಳನ್ನು ಸ್ವಾಗತಿಸುವೆ’’ ಎಂದು ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ ನಂತರ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ತಿಳಿಸಿದ್ದಾರೆ.

‘‘ಐಸಿಸಿ ಟ್ವೆಂಟಿ-20 ವಿಶ್ವಕಪ್ ವಿಶ್ವದ ಶ್ರೇಷ್ಠ ಕ್ರಿಕೆಟಿಗರನ್ನು ಒಂದೇ ವೇದಿಕೆಯಲ್ಲಿ ಒಂದಾಗಿಸುತ್ತದೆ. ಟ್ವೆಂಟಿ-20 ಟೂರ್ನಿಯಲ್ಲಿ ಅಸೋಸಿಯೇಟ್ ಹಾಗೂ ಮಾನ್ಯತೆ ಪಡೆದಿರುವ ತಂಡಗಳಿಗೂ ಅವಕಾಶ ನೀಡಲಾಗುತ್ತಿದೆ. ಟೂರ್ನಿಯ ಮೊದಲ ಸುತ್ತಿನಲ್ಲಿ 8 ತಂಡಗಳು ಸೆಣಸಾಡುತ್ತವೆ. ಸೂಪರ್-10 ಹಂತದಲ್ಲಿ ಅಗ್ರ-10 ತಂಡಗಳು ಮುಖಾಮುಖಿಯಾಗುತ್ತವೆ’’ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ರಿಚರ್ಡ್‌ಸನ್ ಹೇಳಿದ್ದಾರೆ.

ಮೊದಲ ಸುತ್ತು(ಗ್ರೂಪ್ ವಿನ್ನರ್ ತಂಡ ಎರಡನೆ ಸುತ್ತಿಗೇರಲಿದೆ)
ಎ ಗುಂಪು: ಬಾಂಗ್ಲಾದೇಶ, ಹಾಲೆಂಡ್, ಐರ್ಲೆಂಡ್ ಹಾಗೂ ಒಮನ್
ಬಿ ಗುಂಪು: ಝಿಂಬಾಬ್ವೆ, ಸ್ಕಾಟ್ಲೆಂಡ್, ಹಾಂಕಾಂಗ್ ಹಾಗೂ ಅಫ್ಘಾನಿಸ್ತಾನ

ಎರಡನೆ ಸುತ್ತಿನ ಗುಂಪುಗಳು
ಸೂಪರ್ 10 ಗ್ರೂಪ್ 1: ಶ್ರೀಲಂಕಾ, ದಕ್ಷಿಣ ಆಫ್ರಿಕ, ವೆಸ್ಟ್‌ಇಂಡೀಸ್, ಇಂಗ್ಲೆಂಡ್ ಹಾಗೂ ಗ್ರೂಪ್ ಬಿ ವಿನ್ನರ್(ಕ್ಯೂ 1ಬಿ)
ಸೂಪರ್ 10 ಗ್ರೂಪ್ 2: ಭಾರತ, ಪಾಕಿಸ್ತಾನ, ಆಸ್ಟ್ರೇಲಿಯ, ನ್ಯೂಝಿಲೆಂಡ್ ಹಾಗೂ ಗ್ರೂಪ್ ಎ ವಿನ್ನರ್(ಕ್ಯೂ1 ಎ)

ಮಹಿಳಾ ತಂಡ
ಎ ಗುಂಪು: ಆಸ್ಟ್ರೇಲಿಯ(ಎ1), ದಕ್ಷಿಣ ಆಫ್ರಿಕ(ಎ2), ನ್ಯೂಝಿಲೆಂಡ್(ಎ 3), ಶ್ರೀಲಂಕಾ(ಎ4) ಹಾಗೂ ಐರ್ಲೆಂಡ್(ಎ 5)
ಬಿ ಗುಂಪು: ಇಂಗ್ಲೆಂಡ್(ಬಿ1), ವೆಸ್ಟ್‌ಇಂಡೀಸ್(ಬಿ 2), ಭಾರತ(ಬಿ 3), ಪಾಕಿಸ್ತಾನ(ಬಿ 4) ಹಾಗೂ ಬಾಂಗ್ಲಾದೇಶ(ಬಿ5).

ಟ್ವೆಂಟಿ-20 ವಿಶ್ವಕಪ್ ವೇಳಾಪಟ್ಟಿ
ಮೊದಲ ಸುತ್ತು
ಮಾ.8: ಝಿಂಬಾಬ್ವೆ-ಹಾಂಕಾಂಗ್, ನಾಗ್ಪುರ, ಸ್ಕಾಟ್ಲೆಂಡ್-ಅಫ್ಘಾನಿಸ್ತಾನ, ನಾಗ್ಪುರ.
ಮಾ.9: ಬಾಂಗ್ಲಾದೇಶ-ಹಾಲೆಂಡ್, ಧರ್ಮಶಾಲಾ; ಐರ್ಲೆಂಡ್-ಒಮನ್, ಧರ್ಮಶಾಲಾ.
ಮಾ.10: ಸ್ಕಾಟ್ಲೆಂಡ್-ಝಿಂಬಾಬ್ವೆ, ನಾಗ್ಪುರ; ಹಾಂಕಾಂಗ್-ಅಫ್ಘಾನಿಸ್ತಾನ, ನಾಗ್ಪುರ.
ಮಾ.11: ಹಾಲೆಂಡ್-ಒಮನ್, ಧರ್ಮಶಾಲಾ;ಬಾಂಗ್ಲಾದೇಶ-ಐರ್ಲೆಂಡ್, ಧರ್ಮಶಾಲಾ.
ಮಾ.12: ಝಿಂಬಾಬ್ವೆ-ಅಫ್ಘಾನಿಸ್ತಾನ, ನಾಗ್ಪುರ; ಸ್ಕಾಟ್ಲೆಂಡ್-ಹಾಂಕಾಂಗ್, ನಾಗ್ಪುರ.
ಮಾ.13: ಹಾಲೆಂಡ್-ಐರ್ಲೆಂಡ್, ಧರ್ಮಶಾಲಾ;ಬಾಂಗ್ಲಾದೇಶ-ಒಮನ್, ಧರ್ಮಶಾಲಾ.
ಎರಡನೆ ಸುತ್ತು(ಸೂಪರ್-10)
ಮಾ.15: ಭಾರತ-ನ್ಯೂಝಿಲೆಂಡ್, ನಾಗ್ಪುರ
ಮಾ.16: ವೆಸ್ಟ್‌ಇಂಡೀಸ್-ಇಂಗ್ಲೆಂಡ್, ಮುಂಬೈ
ಮಾ.16: ಪಾಕಿಸ್ತಾನ-ಕ್ಯೂ1ಎ, ಕೋಲ್ಕತಾ
ಮಾ.17:ಶ್ರೀಲಂಕಾ-ಕ್ಯೂ1ಬಿ, ಕೋಲ್ಕತಾ
ಮಾ.18:ಆಸ್ಟ್ರೇಲಿಯ-ನ್ಯೂಝಿಲೆಂಡ್, ಧರ್ಮಶಾಲಾ
ಮಾ.18: ದಕ್ಷಿಣ ಆಫ್ರಿಕ-ಇಂಗ್ಲೆಂಡ್, ಮುಂಬೈ
ಮಾ.19: ಭಾರತ-ಪಾಕಿಸ್ತಾನ, ಧರ್ಮಶಾಲಾ
ಮಾ.20: ದಕ್ಷಿಣ ಆಫ್ರಿಕ-ಕ್ಯೂ1ಬಿ, ಮುಂಬೈ
ಮಾ.20:ಶ್ರೀಲಂಕಾ-ವೆಸ್ಟ್‌ಇಂಡೀಸ್, ಬೆಂಗಳೂರು
ಮಾ.21:ಆಸ್ಟ್ರೇಲಿಯ-ಕ್ಯೂ1ಎ, ಬೆಂಗಳೂರು
ಮಾ.22: ನ್ಯೂಝಿಲೆಂಡ್-ಪಾಕಿಸ್ತಾನ,ಮೊಹಾಲಿ
ಮಾ.23:ಇಂಗ್ಲೆಂಡ್-ಕ್ಯೂ1ಬಿ, ಹೊಸದಿಲ್ಲಿ
ಮಾ.23:ಭಾರತ-ಕ್ಯೂ1ಎ, ಬೆಂಗಳೂರು.
ಮಾ.24: ವಿಶ್ರಾಂತಿ ದಿನ
ಮಾ.25: ಪಾಕಿಸ್ತಾನ-ಆಸ್ಟ್ರೇಲಿಯ, ಮೊಹಾಲಿ
ಮಾ.25: ದಕ್ಷಿಣ ಆಫ್ರಿಕ-ವೆಸ್ಟ್‌ಇಂಡೀಸ್,ನಾಗ್ಪುರ
ಮಾ.26:ಕ್ಯೂ1ಎ-ನ್ಯೂಝಿಲೆಂಡ್, ಕೋಲ್ಕತಾ
ಮಾ.26:ಇಂಗ್ಲೆಂಡ್-ಶ್ರೀಲಂಕಾ, ಹೊಸದಿಲ್ಲಿ
ಮಾ.27: ಭಾರತ-ಆಸ್ಟ್ರೇಲಿಯ, ಮೊಹಾಲಿ
ಮಾ.27: ವೆಸ್ಟ್‌ಇಂಡೀಸ್-ಕ್ಯೂ1ಬಿ, ನಾಗ್ಪುರ
ಮಾ.28:ದಕ್ಷಿಣ ಆಫ್ರಿಕ-ಶ್ರೀಲಂಕಾ, ಹೊಸದಿಲ್ಲಿ
ಮಾ.29: ವಿಶ್ರಾಂತಿ ದಿನ
ಮಾ.30: ಸೆಮಿಫೈನಲ್ 1(ಸೂಪರ್ 10 ಗ್ರೂಪ್ 2 ಪ್ರಥಮ-ಸೂಪರ್ 10 ಗ್ರೂಪ್ 1 ದ್ವಿತೀಯ) ಹೊಸದಿಲ್ಲಿ.
ಮಾ.31:ಸೆಮಿಫೈನಲ್-2(ಸೂಪರ್ 10 ಗ್ರೂಪ್-1 ಪ್ರಥಮ-ಸೂಪರ್ 10 ಗ್ರೂಪ್ 2 ದ್ವಿತೀಯ), ಮುಂಬೈ.
ಎ.1: ವಿಶ್ರಾಂತಿ/ಪ್ರಯಾಣದ ದಿನ
ಎ.2: ವಿಶ್ರಾಂತಿ/ಪ್ರಯಾಣದ ದಿನ
ಎ.3: ಫೈನಲ್, ಕೋಲ್ಕತಾ.

Write A Comment