-ಅಮಿತ್ ಎಂ.ಎಸ್.
ಬೇಸಿಗೆ ಬಂತೆಂದರೆ ಇಡೀ ಊರಿಗೆ ಊರೇ ಕೆಲಸ ಅರಸಿ ಪಟ್ಟಣ, ನಗರಗಳಿಗೆ ಗುಳೆ ಹೋಗುವ ಪರಿಸ್ಥಿತಿ. ಹತ್ತಾರು ಎಕರೆ ಜಮೀನು ಹೊಂದಿದ್ದರೂ ಅದನ್ನು ನೆಚ್ಚಿಕೊಂಡು ಬದುಕಲಾಗದ ಕಠೋರ ಸ್ಥಿತಿ ಈ ಜನರದ್ದು. ಇದಕ್ಕೆ ಕಾರಣ ನೀರಿನ ಕೊರತೆ.
ಜಮೀನ್ದಾರರಾಗಿದ್ದೂ ಅಲ್ಪ ಮೊತ್ತದ ಸಂಬಳಕ್ಕಾಗಿ ಬೇರೆಯವರ ಎದುರು ಕೈಚಾಚುವ ಅನಿವಾರ್ಯತೆ. ರೈತಾಪಿ ಮಂದಿಯ ಈ ದಾರುಣ ಪರಿಸ್ಥಿತಿಯನ್ನು ನಿರ್ದೇಶಕ ವೆಂಕಟಾಚಲ (ಚಲಂ) ಸಿನಿಮಾ ಮೂಲಕ ಕಟ್ಟಿಕೊಡಲು ಮುಂದಾಗಿದ್ದಾರೆ. ‘ಸುಡುವ ಭೂಮಿ’ಯಲ್ಲಿ ಬೇಯುವ ಜನರ ಸಂಕಟದ ಜೀವನವನ್ನು ಬದಲಾವಣೆಯ ಆಶಯದೊಂದಿಗೆ ಚಿತ್ರಿಸುವುದು ಅವರ ಉದ್ದೇಶ.
‘ಚಿತ್ರಮಂದಿರದಲ್ಲಿ’ ಎಂಬ ಪ್ರಯೋಗಶೀಲ ಸಿನಿಮಾ ಮೂಲಕ ಗಮನ ಸೆಳೆದಿದ್ದವರು ಚಲಂ. ‘ಸುಡುವ ಭೂಮಿ’ ಇನ್ನೂ ಹೆಚ್ಚು ಕಲಾತ್ಮಕತೆಯನ್ನು ಅಪ್ಪಿಕೊಂಡ ಸಮಾಜಮುಖಿ ಸಿನಿಮಾ ಎನ್ನುವುದು ಅವರ ವಿವರಣೆ.
ಮಹಾನಗರದಲ್ಲಿಯೇ ನೀರಿನ ಬವಣೆಯನ್ನು ಕಾಣುತ್ತಿರುವಾಗ ಉತ್ತರ ಕರ್ನಾಟಕದಲ್ಲಿನ ಹಳ್ಳಿಗಳ ಪರಿಸ್ಥಿತಿ ಇನ್ನೂ ಶೋಚನೀಯ. ಕುಡಿಯಲು ನೀರಿಲ್ಲದೆ ಪರದಾಡುವ ಜನರನ್ನು ದಲ್ಲಾಳಿಗಳೇ ಬೇರೆ ಬೇರೆ ನಗರಗಳಲ್ಲಿ ಕೆಲಸಗಳಿಗೆ ನಿಯೋಜಿಸಿ ಕಮಿಷನ್ ಪಡೆಯುವ ಸನ್ನಿವೇಶವಿದೆ. ಗುಳೆ ಬಂದವರನ್ನು ರಾಜಕೀಯ ಕಾರಣಗಳಿಗೂ ಬಳಸಿಕೊಳ್ಳುವವರಿದ್ದಾರೆ.
ಹೀಗೆ ಗುಳೆ ಹೋಗುವ ಹೆಚ್ಚಿನವರು ಮರಳಿ ಊರಿಗೆ ಬರುವುದೇ ಇಲ್ಲ. ಮಕ್ಕಳ ಓದು, ಮದುವೆ ಇತ್ಯಾದಿ ಕನಸುಗಳನ್ನು ಕಟ್ಟಿಕೊಂಡ ಅವರಿಗೆ ಗುಳೆಯ ಹೊರತು ಬೇರೆ ಮಾರ್ಗವೂ ತೋಚುವುದಿಲ್ಲ. ವಿಪರ್ಯಾಸವೆಂದರೆ ಈ ಹಳ್ಳಿಗಳ ಸಮೀಪವೇ ನದಿಗಳು ಹರಿಯುತ್ತಿರುತ್ತವೆ. ಆದರೂ ಅವರಿಗೆ ನೀರು ಸಿಗುವುದಿಲ್ಲ. ಈ ವಾಸ್ತವಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ದುಗ್ಗಿ ಎಂಬ ಹೋರಾಟದ ಮನೋಭಾವದ ಹೆಣ್ಣುಮಗಳ ಪ್ರಯತ್ನವನ್ನು ‘ಸುಡುವ ಭೂಮಿ’ ಚಿತ್ರಿಸುತ್ತದೆ ಎನ್ನುತ್ತಾರೆ ಚಲಂ.
ತನ್ನ ಹಳ್ಳಿಯಿಂದ 30 ಕಿ.ಮೀ ದೂರದಲ್ಲಿ ಹರಿಯುವ ನದಿಯಿಂದ ನೀರನ್ನು ಹಳ್ಳಿಗೆ ತರಲು ಹೋರಾಡುವ ದುಗ್ಗಿ, ಹೀಗೆ ಗುಳೆ ಹೋಗಿದ್ದ ತನ್ನ ತಂದೆ ತಾಯಿ ಮತ್ತು ತಂಗಿಯನ್ನು ಕಳೆದುಕೊಂಡಾಕೆ. ಕಾಲುವೆ ಮೂಲಕ ನೀರುವ ತರುವ ಆಕೆಯ ಉದ್ದೇಶಕ್ಕೆ ಯಾರಿಂದಲೂ ಸಹಕಾರ ದೊರಕುವುದಿಲ್ಲ. ಕೊನೆಗೆ ಆಕೆ ಒಬ್ಬಂಟಿಯಾಗಿಯೇ ಪುರುಷ ವೇಷದಲ್ಲಿ ಕಾಲುವೆ ತೋಡಲು ಪ್ರಾರಂಭಿಸುತ್ತಾಳೆ. ಹೀಗೆ ಒಂದು ಸಕಾರಾತ್ಮಕ ನಡೆಯ ಮೂಲಕ ಈ ಪ್ರಪಂಚ ಅನಾವರಣಗೊಳ್ಳುತ್ತದೆ ಎನ್ನುತ್ತಾರೆ ಅವರು.
ಸಮಾಜದ ನೈಜ ಪರಿಸ್ಥಿತಿ ಇಲ್ಲಿದ್ದರೂ, ಚಲಂ ಯಾವುದೇ ನಿರ್ದಿಷ್ಟ ಘಟನೆಯಿಂದ ಸ್ಫೂರ್ತಿಗೊಳಗಾಗದೇ ತಮ್ಮದೇ ಆಶಯದೊಂದಿಗೆ ಕಥನವನ್ನು ಹೆಣೆದಿದ್ದಾರೆ. ಆ ಆಶಯದಲ್ಲಿಯೇ ಪಾತ್ರಗಳೂ ಸೃಷ್ಟಿಯಾಗಿವೆ. ನೀರಿನ ಕೊರತೆ ಸರ್ವವ್ಯಾಪಿ, ಗಂಭೀರ ಸಮಸ್ಯೆಯಾಗಿರುವುದರಿಂದ ಸಿನಿಮಾ ಕೂಡ ಅದನ್ನು ಅಷ್ಟೇ ಗಂಭೀರವಾಗಿ ಹಿಡಿದಿಡುತ್ತದೆ. ಗುಳೆ ಹೋದವರು ನಗರಗಳಲ್ಲಿ ಅನುಭವಿಸುವ ಸಂಕಟಗಳನ್ನು ತೆಳುವಾಗಿ ಚಿತ್ರಿಸಿ, ದುಗ್ಗಿಯ ಸಾಹಸಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಚಲಂ ವಿವರಿಸುತ್ತಾರೆ.
ಪಾತ್ರ ಬಯಸುವ ಗಟ್ಟಿತನದ ಅಭಿನಯವನ್ನು ಪೋಷಿಸುವುದು ರಂಗಭೂಮಿ ಕಲಾವಿದರಿಂದ ಮಾತ್ರ ಸಾಧ್ಯ ಎನ್ನುವುದು ಅವರ ನಂಬಿಕೆ. ತಮ್ಮ ಚಿತ್ರಕ್ಕೆ ರಂಗಭೂಮಿಯ ಹೊಸ ಕಲಾವಿದರನ್ನು ಅವರು ಆಯ್ದುಕೊಂಡಿದ್ದಾರೆ. ಇವರೆಲ್ಲರೂ ಅವಕಾಶ ವಂಚಿತ ಪ್ರತಿಭೆಗಳು ಎಂದು ಹೇಳುತ್ತಾರೆ ಅವರು. ಸುನಿತಾ ರಾಮಾಚಾರ್ಯ, ಶಿವರಾಜ್, ವಿಜಿ ಮುಂತಾದ ರಂಗಪ್ರತಿಭೆಗಳು ಇಲ್ಲಿದ್ದಾರೆ.
ಈ ಸಿನಿಮಾದ ಮೂಲಕ ಗುಳೆ ಹೊರಡುವ ಜನರ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವ ಮತ್ತು ಅದಕ್ಕೆ ಪರಿಹಾರ ಒದಗುತ್ತದೆ ಎಂಬ ಭರವಸೆ ಅವರಿಗಿಲ್ಲ. ಯಾವುದೇ ಸಿನಿಮಾ, ಸಾಹಿತ್ಯ ಅಥವಾ ಕಲೆ ವೈಯಕ್ತಿಕವಾಗಿ ಪರಿಣಾಮ ಬರಬಹುದೇ ಹೊರತು ಸಮುದಾಯವನ್ನು ಬದಲಿಸಲಾರದು ಎನ್ನುವುದು ಅವರ ಅನುಭವ.
‘ಚಿತ್ರಮಂದಿರದಲ್ಲಿ’ ಸಿನಿಮಾ ಸೋಲಿನ ಕಹಿ ಅವರ ಮನಸಿನಲ್ಲಿ ಇನ್ನೂ ಇದೆ. ಹೀಗಾಗಿ ಇಂತಹ ಸಿನಿಮಾಗಳನ್ನು ಬಿಡುಗಡೆ ಮಾಡುವುದು ಸುಲಭವಲ್ಲ. ಮಾಡಿದರೂ ಜನರನ್ನು ಸೆಳೆಯುವುದು ಇನ್ನೂ ಕಷ್ಟ ಎಂದು ಹೇಳುತ್ತಾರೆ.
ಪ್ರಯೋಗಗಳು ಸೋತಾಗ
ಕನ್ನಡಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಬರುತ್ತಲೇ ಇಲ್ಲ ಎಂಬ ಆರೋಪಕ್ಕೆ ಚಲಂ ಉತ್ತರಿಸುವುದು ಹೀಗೆ; ‘2013ರಲ್ಲಿ ಸುಮಾರು 10 ಪ್ರಯೋಗಾತ್ಮಕ ಸಿನಿಮಾಗಳು ಕನ್ನಡದಲ್ಲಿ ಬಂದಿದ್ದವು. ಅವುಗಳಲ್ಲಿ ಒಂದೂ ಗೆಲ್ಲಲಿಲ್ಲ. ಹೀಗಾಗಿ ಕಳೆದ ವರ್ಷ ಅಂತಹ ಒಂದೂ ಸಿನಿಮಾ ಬರಲಿಲ್ಲ. ಗೆಲುವು ದಕ್ಕದಿದ್ದಾಗ ಅಂತಹ ಸಿನಿಮಾ ಮಾಡಲು ನಿರ್ದೇಶಕರೂ ಭಯಪಡುತ್ತಾರೆ.
ತಮಿಳಿನಲ್ಲಿ ಪ್ರಯೋಗಾತ್ಮಕ ಸಿನಿಮಾಗಳನ್ನು ನೋಡುವ ಕಲೆಯನ್ನು ಪ್ರೇಕ್ಷಕರಲ್ಲಿ ಸಿನಿಮಾರಂಗವೇ ಕಲಿಸಿದೆ. ನನ್ನ ‘ಚಿತ್ರಮಂದಿರದಲ್ಲಿ’ ಸಿನಿಮಾ ಸಂಕಲನಕಾರ, ‘ಸಾರ್ ಇದು ತಮಿಳು ಸಿನಿಮಾ’ ಎಂದು ಸ್ಟೇಟ್‌ಮೆಂಟನ್ನೇ ನೀಡಿಬಿಟ್ಟ. ಅಂದರೆ ಕ್ರಿಯೇಟಿವಿಟಿ ಇರುವ ಸಿನಿಮಾಗಳೆಲ್ಲಾ ತಮಿಳಿನವು ಎನ್ನುವಂತಾಗಿದೆ. ಬರುವ ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ಎಲ್ಲಿ ಸಿಗುತ್ತಿದೆ? 2013ರಲ್ಲಿ ಬಿಡುಗಡೆಯಾದ ಈ ಹತ್ತು ಸಿನಿಮಾಗಳಲ್ಲಿ ಒಂದಕ್ಕೂ ರಾಜ್ಯ ಪ್ರಶಸ್ತಿ ಬರಲಿಲ್ಲ. ಪ್ರಶಸ್ತಿ ಬಂದದ್ದು ಜನರ ಬಳಿಗೇ ಬಾರದ, ಗೊತ್ತೇ ಇರದ ಸಿನಿಮಾಗಳಿಗೆ’.
‘ಕ್ರಾಂತಿ ಕಹಳೆ’ಗೆ ರೀರೆಕಾರ್ಡಿಂಗ್
ಎ.ಆರ್. ಬಾಬು ನಿರ್ದೇಶನ ಮತ್ತು ನಿರ್ಮಾಣವಿರುವ ಸ್ವಾತಂತ್ರ್ಯ ಪೂರ್ವ ಕಥಾವಸ್ತು ಹೊಂದಿರುವ ‘ಕ್ರಾಂತಿ ಕಹಳೆ’ ಚಿತ್ರದ ಚಿತ್ರೀಕರಣ ಕೇವಲ15ದಿನಗಳಲ್ಲಿ ಪೂರ್ಣಗೊಂಡಿದ್ದು ಸದ್ಯ ರೀರೆಕಾರ್ಡಿಂಗ್ ನಡೆಯುತ್ತಿದೆ. ಕುಶಾಲನಗರ, ಮಡಿಕೇರಿ, ಮೈಸೂರು ಹಾಗೂ ಬೆಂಗಳೂರು ಸುತ್ತ ಮುತ್ತ 1932 ರಿಂದ 1942ರ ದಿನಮಾನಕ್ಕೆ ತಕ್ಕಂತೆ ಸ್ಥಳಗಳನ್ನು ಆಯ್ದುಕೊಳ್ಳಲಾಗಿದೆ.
ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಸಾವಿರಾರು ಹುತಾತ್ಮರಿಗೆ ನಿರ್ದೇಶಕರು ಈ ಚಿತ್ರವನ್ನು ಅರ್ಪಿಸಿದ್ದಾರೆ. ಶುಭಾ ಪೂಂಜಾ, ಎ.ಆರ್. ಬಾಬು ಪುತ್ರ ಸೋಹಲ್, ತುಷಾಲ್, ಸಹನಾ ಮೂರ್ತಿ, ಧನುಷ್, ಲಲಿತಮ್ಮ ಇತರರು ತಾರಾಗಣದಲ್ಲಿದ್ದಾರೆ. ಕವಿ ಸಿದ್ದಲಿಂಗಯ್ಯ ಅವರ ಜೊತೆಗೂಡಿ ಶಾನ್ ಸಾಹಿತ್ಯ, ಸಂಭಾಷಣೆ ರಚಿಸಿದ್ದಾರೆ. ಗುರುರಾಜ ಹೊಸಕೋಟೆ ಸಂಗೀತ, ರವಿ ಸುವರ್ಣ ಛಾಯಾಗ್ರಹಣ ಚಿತ್ರಕ್ಕಿದೆ.