ಮೈಸೂರು: ಈ ಹಿಂದೆ ಸತತ ಮೂರು ಬಾರಿ ಫೈನಲ್ ತಲುಪಿ ನಿರಾಸೆ ಅನುಭವಿಸಿದ್ದ ತಂಡದಲ್ಲೀಗ ಖುಷಿಯ ಅಲೆ. ಚೊಚ್ಚಲ ಟ್ರೋಫಿ ಗೆದ್ದ ಸಂತಸ. ಕೌಶಲಭರಿತ ಹಾಗೂ ಯೋಜನಾಬದ್ಧ ಆಟಕ್ಕೆ ಫಲ ಸಿಕ್ಕಿತು.
ಸೊಗಸಾದ ಆಟದ ಮೂಲಕ ಮಿಂಚು ಹರಿಸಿದ ಒಡಿಶಾ ತಂಡದವರು ಸುಮಿತ್ ಗಳಿಸಿದ ಮೂರು ಗೋಲುಗಳ ನೆರವಿನಿಂದ ‘ಹಾಕಿ ಕರ್ನಾಟಕ’ ಆಶ್ರಯದ ರಾಷ್ಟ್ರೀಯ ಜೂನಿಯರ್ ‘ಎ’ ಡಿವಿಷನ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಟ್ರೋಫಿ ಎತ್ತಿ ಹಿಡಿದರು.
ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿ ಬುಧವಾರ ನಡೆದ ಫೈನಲ್ ಮುಖಾ ಮುಖಿಯಲ್ಲಿ ಒಡಿಶಾ ತಂಡದವರು 4–3 ಗೋಲುಗಳಿಂದ ಬಲಿಷ್ಠ ಪಂಜಾಬ್ ತಂಡವನ್ನು ಸೋಲಿಸಿದರು. ಸತತ ಮೂರು ಬಾರಿ ಚಾಂಪಿಯನ್ ಆಗಿದ್ದ ಪಂಜಾಬ್ ತೀವ್ರ ಪ್ರತಿರೋಧ ನೀಡಿತು. ವಿರಾಮದ ವೇಳೆಗೆ 2–1 ಗೋಲುಗಳ ಮೇಲುಗೈ ಸಾಧಿಸಿತ್ತು. ಆದರೆ, ದ್ವಿತೀ ಯಾರ್ಧದಲ್ಲಿ ಎಸಗಿದ ಪ್ರಮಾದಗಳಿಂದ ಸೋಲು ಬಂದಪ್ಪಳಿಸಿತು.
ನಾಯಕ ಹರ್ಜೀತ್ ಸಿಂಗ್ 19ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಪಂಜಾಬ್‌ಗೆ 1–0 ಮುನ್ನಡೆ ತಂದು ಕೊಟ್ಟರು.
27ನೇ ನಿಮಿಷದಲ್ಲಿ ವಿಜಯಿ ತಂಡದ ಸುಮಿತ್ ತಂದಿತ್ತ ಗೋಲು 1–1 ಸಮಬಲಕ್ಕೆ ಕಾರಣವಾಯಿತು. 33ನೇ ನಿಮಿಷದಲ್ಲಿ ಸಿಮ್ರಾನ್‌ಜಿತ್ ಸಿಂಗ್ ಗಳಿಸಿದ ಗೋಲು ಮತ್ತೆ ಪಂಜಾಬ್‌ಗೆ ಮುನ್ನಡೆ ಒದಗಿಸಿತು.
ಸುಮಿತ್ ಗೆಲುವಿನ ರೂವಾರಿ: ಹೋದ ಬಾರಿಯ ರನ್ನರ್ ಅಪ್ ಒಡಿಶಾ ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಇದರಿಂದ ಫಲ ಕೂಡ ಲಭಿಸಿತು. 41ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪ್ರಕಾಶ್ ಬಾರ್ಲಾ ಗೋಲಾಗಿ ಪರಿವರ್ತಿಸಿದರು. ಇದರಿಂದಾಗಿ ಪಂದ್ಯ 2–2 ಸಮಬಲವಾಯಿತು.
ಏಳು ನಿಮಿಷಗಳ ಅಂತರದಲ್ಲಿ ಒಡಿಶಾಗೆ ಮತ್ತೊಂದು ಉತ್ತಮ ಅವಕಾಶ ಲಭಿಸಿತು. ಈ ಹಂತದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶ ವನ್ನು ಗೋಲಾಗಿ ಪರಿವರ್ತಿಸಿದ ಸುಮಿತ್ ತಂಡದ ಮುನ್ನಡೆಯನ್ನು 3–2ಕ್ಕೆ ಹೆಚ್ಚಿಸಿದರು. ಅಷ್ಟೇ ಅಲ್ಲ, ಅವರು 61ನೇ ನಿಮಿಷದಲ್ಲಿ ತಂದಿತ್ತ ಮತ್ತೊಂದು ಗೋಲು ಪಂಜಾಬ್‌ಗೆ ದೊಡ್ಡ ಆಘಾತ ನೀಡಿತು.
ಪಂದ್ಯ ಮುಗಿಯಲು ಎರಡು ನಿಮಿಷಗಳಿದ್ದಾಗ ಅಜಿತ್ ಪಂಡಿತ್ ಗಳಿಸಿದ ಗೋಲು ಪಂಜಾಬ್ ತಂಡದ ಸೋಲಿನ ಅಂತರವನ್ನು ಕೊಂಚ ಕುಗ್ಗಿಸಿತಷ್ಟೆ.
ಹರಿಯಾಣಕ್ಕೆ 3ನೇ ಸ್ಥಾನ: ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಗೆದ್ದು ಬೀಗಿದ್ದು ಹರಿಯಾಣ. ಈ ತಂಡದವರು 3–0 ಗೋಲುಗಳಿಂದ ಹಿಮಾಚಲ ಪ್ರದೇಶ ತಂಡವನ್ನು ಪರಾಭವಗೊಳಿಸಿದರು. ಹಿಮಾಚಲ ನಾಲ್ಕನೇ ಸ್ಥಾನ ಗಳಿಸಿತು.
ಆಟಗಾರರ ಸಾಮರ್ಥ್ಯ ವೀಕ್ಷಿಸಿದ್ದೇನೆ. 48 ಮಂದಿಯನ್ನು ಆಯ್ಕೆ ಮಾಡಿ ಶಿಬಿರ ಆಯೋಜಿಸಲಾಗುವುದು. ಶಿಬಿರದಲ್ಲಿ ಗಮನ ಸೆಳೆದವರನ್ನು ರಾಷ್ಟ್ರೀಯ ಜೂನಿಯರ್ ತಂಡಕ್ಕೆ ಪರಿಗಣಿಸಲಾಗುವುದು.
-ಸೈಯದ್ ಅಲಿ, ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯ
ಊರಿಂದಾಚೆ ಅಷ್ಟು ದೂರ ಹೋಗಿ ಏನೋ ಸಾಧನೆ ಮಾಡಿದ್ದಕ್ಕೆ ಖುಷಿ ಆಗಿದೆ. ಇನ್ನು ಹುಡುಗ್ರ ಕಾಲ. ಅವ್ರು ಈ ಉದ್ಯಮ ಮುಂದುವರಿಸ್ಬೇಕು
-ಪ್ರಶಾಂತ್ ಟರ್ಕಿ, ಒಡಿಶಾ ತಂಡದ ನಾಯಕ
ವಿಶೇಷ ಪ್ರಶಸ್ತಿಗಳು
*ಅತ್ಯುತ್ತಮ ಗೋಲ್‌ಕೀಪರ್ ಪಂಕಜ್ (ಎಸ್‌ಎಐಎಲ್)
*ಅತ್ಯುತ್ತಮ ಡಿಫೆಂಡರ್ ಹರ್ಮನ್‌ಜಿತ್ ಸಿಂಗ್ (ಪಂಜಾಬ್)
*ಅತ್ಯುತ್ತಮ ಮಿಡ್‌ಫೀಲ್ಡರ್ ನಿಲೇಶ್ ಕಿರೊ (ಜಾರ್ಖಂಡ್)
*ಅತ್ಯುತ್ತಮ ಫಾರ್ವರ್ಡ್ ಸಿಮ್ರಾನ್‌ಜಿತ್ ಸಿಂಗ್ (ಪಂಜಾಬ್)