ಮನೋರಂಜನೆ

ನನ್ನ ಮಕ್ಕಳು ಹೀಗೆ ಮಾಸ್ಕ್ ಧರಿಸಿ ಬದುಕಬೇಕಾಗಿರುವುದು ಬೇಸರದ ಸಂಗತಿ: ಸನ್ನಿ ಲಿಯೋನ್

Pinterest LinkedIn Tumblr


ಮುಂಬೈ: ವಿಶ್ವದೆಲ್ಲೆಡೆ ಆಂತಕ ಸೃಷ್ಟಿಸಿರುವ ಕೊರೊನಾ ವೈರಸ್ ಹೆಸರು ಕೇಳಿದರೆ ಭಯಬೀಳುವ ಪರಿಸ್ಥಿತಿ ಸದ್ಯ ಎಲ್ಲೆಡೆ ನಿರ್ಮಾಣವಾಗಿದೆ. ಈ ಮದ್ಯೆ ಬಾಲಿವುಡ್ ನಟಿ, ಮಾದಕ ಚೆಲುವೆ ಸನ್ನಿ ಲಿಯೋನ್ ನನ್ನ ಮಕ್ಕಳು ಹೀಗೆ ಮಾಸ್ಕ್ ಧರಿಸಿ ಬದುಕಬೇಕಾಗಿರುವುದು ಬೇಸರದ ಸಂಗತಿ ಎಂದು ಹೇಳಿಕೊಂಡಿದ್ದಾರೆ.

ಭಾರತಕ್ಕೆ ಕಾಲಿಟ್ಟಿರುವ ಕೊರೊನಾ ಸೋಂಕಿನಿಂದ ಆತಂಕಕ್ಕೊಳಗಾದ ಸನ್ನಿ ಲಿಯೋನ್ ತಮ್ಮ ಕುಟುಂಬವನ್ನು ಸೋಂಕಿನಿಂದ ರಕ್ಷಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ತಮ್ಮ ಮೂವರು ಮಕ್ಕಳಿಗೂ ಮಾಸ್ಕ್ ಧರಿಸುವುದನ್ನ ಅಭ್ಯಾಸ ಮಾಡಿಸುತ್ತಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಸನ್ನಿ ಫೋಟೋವನ್ನು ಹಂಚಿಕೊಂಡು ಕೊರೊನಾ ವೈರಸ್‍ನಿಂದ ದೂರವಿರಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸೋದು ಮುಖ್ಯ ಎನ್ನೊದನ್ನ ಸಾರಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ಇದು ಹೊಸ ಯುಗ, ನನ್ನ ಮಕ್ಕಳು ಹೀಗೆ ಮಾಸ್ಕ್ ಧರಿಸಿ ಬದುಕಬೇಕಾಗಿರೋದು ದುಃಖದ ಸಂಗತಿ. ಆದ್ರೆ ಹೀಗೆ ಇರೋದು ತುಂಬಾ ಮುಖ್ಯ. ಮಕ್ಕಳಿಗೆ ಮಾಸ್ಕ್ ಧರಿಸುವುದನ್ನ ಅಭ್ಯಾಸ ಮಾಡಿಸುತ್ತಿದ್ದೇನೆ ಎಂದು ಬರೆದು, ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬ್ಬರ್ ಹಾಗೂ ಮೂವರು ಮಕ್ಕಳ ಜೊತೆ ಮಾಸ್ಕ್ ಧರಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ಹಿಂದೆ ಕೊರೊನಾ ಭೀತಿಗೆ ಅಭಿಮಾನಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸನ್ನಿ ಹಿಂಜರಿದಿದ್ದರು. ಪತಿ ಡೇನಿಯಲ್ ವೆಬ್ಬರ್ ಜೊತೆ ಫಿಲ್ಮ್ ಶೂಟಿಂಗ್‍ನಲ್ಲಿ ಬ್ಯುಸಿಯಿದ್ದ ಸನ್ನಿ ಚಿತ್ರದ ಚಿತ್ರೀಕರಣಕ್ಕಾಗಿ ಸನ್ನಿ ವಿದೇಶಕ್ಕೆ ತೆರಳಿದ್ದರು. ಶೂಟಿಂಗ್ ಬಳಿಕ ಭಾರತಕ್ಕೆ ಹಿಂತಿರುಗಿದ್ದಾಗ ವಿಮಾನ ನಿಲ್ದಾಣದಲ್ಲಿ ಅವರನ್ನು ನೋಡಿದ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು. ಆದರೆ ಸನ್ನಿ ಅಭಿಮಾನಿಗಳಿಂದ ದೂರ ಓಡಿದ್ದರು.

ಸನ್ನಿ ಯಾವಾಗಲೂ ತಮ್ಮ ಚಿತ್ರತಂಡದ ಜೊತೆ ಎಂಜಾಯ್ ಮಾಡುತ್ತಿರುತ್ತಾರೆ. ಅಲ್ಲದೆ ಅಭಿಮಾನಿಗಳು ಸೆಲ್ಫಿ ಕೇಳಿದರೆ ಅವರನ್ನು ನಿರಾಸೆ ಮಾಡದೇ ಪೋಸ್ ನೀಡುತ್ತಾರೆ. ಆದರೆ ಕೊರೊನಾ ವೈರಸ್‍ನಿಂದಾಗಿ ಸನ್ನಿ ಅಭಿಮಾನಿಗಳಿಗೆ ಸೆಲ್ಫಿ ನೀಡಲು ಹಿಂಜರಿದಿದ್ದರು. ಅಲ್ಲದೇ ಕೊರೊನಾದಿಂದ ದೂರವಿರಿ, ಸೇಫ್ ಆಗಿರಿ ಎಂದು ಅಭಿಮಾನಿಗಳಿಗೆ ಸನ್ನಿ ಕಿವಿ ಮಾತು ಹೇಳಿದ್ದರು.

ಒಟ್ಟು 162 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈವರೆಗೆ ಸುಮಾರು 1,82,605 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಅಲ್ಲದೇ ಚೀನಾದಲ್ಲಿ 3,226 ಮಂದಿ ಸೇರಿದಂತೆ ವಿಶ್ವದೆಲ್ಲೆಡೆ ಒಟ್ಟು 7,171 ಮಂದಿ ಕೊರೊನಾ ಸೋಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 79,881 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ 95,546 ಮಂದಿ ಸೋಂಕಿನಿಂದ ಬಳಲುತ್ತಿದ್ದು, ಅವರಲ್ಲಿ 6,163 ಮಂದಿ ಸ್ಥಿತಿ ಚಿಂತಾಜನಕವಾಗಿದೆ.

ಭಾರತಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್‍ಗೆ ಈವರೆಗೆ 129 ಮಂದಿ ತುತ್ತಾಗಿದ್ದು, 13 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 114 ಮಂದಿ ಕೊರೊನಾದಿಂದ ಬಳಳುತ್ತಿದ್ದಾರೆ. ಈಗಾಗಲೇ ಕೊರೊನಾಗೆ ಕರ್ನಾಟಕದ ಕಲಬುರಗಿ, ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ತಲಾ ಒಬ್ಬರಂತೆ ಒಟ್ಟು ಮೂವರು ಸಾವನ್ನಪ್ಪಿದ್ದಾರೆ. ಕರ್ನಾಟದಲ್ಲಿ ಒಟ್ಟು 11 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು 39 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ.

Comments are closed.