ಮನೋರಂಜನೆ

ಪೋರ್ನ್ ವಿಡಿಯೋ ನೋಡಲು ಒತ್ತಾಯಿಸಿದ ಬಾಲಿವುಡ್ ಡ್ಯಾನ್ಸ್ ಮಾಸ್ಟರ್ ವಿರುದ್ಧ ದೂರು

Pinterest LinkedIn Tumblr


ಮುಂಬೈ: ಬಾಲಿವುಡ್‍ನ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರ ವಿರುದ್ಧ 33 ವರ್ಷದ ಮಹಿಳೆ ಕಿರುಕುಳದ ಆರೋಪ ಮಾಡಿದ್ದು, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (ಎನ್‍ಸಿಡಬ್ಲ್ಯು)ಗೆ ಪತ್ರ ಬರೆದು ದೂರು ನೀಡಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಜೊತೆಗೆ ಅಂಬೋಲಿ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದಾರೆ. ಆಚಾರ್ಯ ಅವರ ಕಚೇರಿಗೆ ಹೋದಾಗಲೆಲ್ಲಾ ಪೋರ್ನ್ ವಿಡಿಯೋಗಳನ್ನು ನೋಡುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೇ ತನಗೆ ಬರುವ ಆದಾಯದಲ್ಲಿ ಕಮಿಷನ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುಂಬೈನ ಅಂಧೇರಿಯಲ್ಲಿ ಭಾನುವಾರ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನೃತ್ಯ ಸಂಯೋಜಕರ ಸಂಘ (ಐಎಫ್‍ಟಿಸಿಎ)ದ ಸಮಾರಂಭ ನಡೆದಿತ್ತು. ಅಲ್ಲಿ ಗಣೇಶ್ ಆಚಾರ್ಯ ಮತ್ತು ಇಬ್ಬರು ಮಹಿಳೆಯರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಗಣೇಶ್ ಆಚಾರ್ಯ ಜೊತೆಗೆ ಜಯಶ್ರೀ ಕೆಲ್ಕರ್ ಮತ್ತು ಪ್ರೀತಿ ಲಾಡ್ ಎಂಬವರು ಹಲ್ಲೆ ಮಾಡಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೃತ್ಯ ಸಂಯೋಜಕ ಸಂಘದ ಸದಸ್ಯೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಗಣೇಶ್ ಆಚಾರ್ಯ ಆಗಾಗ ಕಚೇರಿಗೆ ಕರೆಯುತ್ತಿದ್ದರು. ಜನವರಿ 26 ರಂದು ಕಚೇರಿಗೆ ಹೋದಾಗ ನೃತ್ಯ ಸಂಯೋಜಕ ಸಂಘದಲ್ಲಿ ಸದಸ್ಯತ್ವ ರದ್ದು ಮಾಡಿಸಿದ್ದಾರೆ. ಅಲ್ಲದೇ ತಮ್ಮ ತಂಡದ ಸದಸ್ಯ ಜಯಶ್ರೀ ಕೇಲ್ಕರ್ ಅವರನ್ನು ಕರೆದು ನನಗೆ ಹೊಡೆಯುವಂತೆ ಹೇಳಿದ್ದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸದ್ಯಕ್ಕೆ ಪೊಲೀಸರು ಗಂಭೀರವಲ್ಲದ ಅಪರಾಧ (ಎನ್‍ಸಿ) ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ಅವರು ಗಣೇಶ್ ಆಚಾರ್ಯ ವಿರುದ್ಧ ಕಿಡಿ ಕಾರಿದ್ದರು. ನೃತ್ಯಗಾರರನ್ನು ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಬಹಿರಂಗವಾಗಿ ಆರೋಪಿಸಿದ್ದರು.

ಗಣೇಶ್ ಆಚಾರ್ಯ ಅವರು ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾದ ಹಿಂದಿ ‘ಗಲಿ ಗಲಿ ಮೇ’ ಹಾಡು, ಅಲ್ಲದೇ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದ ಇಂಟ್ರೋ ಹಾಡಿಗೆ ಗಣೇಶ್ ನೃತ್ಯ ಸಂಯೋಜನ ಮಾಡಿದ್ದಾರೆ. ಈ ಮೂಲಕ ಸ್ಯಾಂಡಲ್‍ವುಡ್‍ಗೂ ಗಣೇಶ್ ಪರಿಚಯರಾಗಿದ್ದಾರೆ.

Comments are closed.