ಮುಂಬೈ

ಕಾರ್ಯಕ್ರಮದ ವಿಡಿಯೋ ಎಂದು ವಿದ್ಯಾರ್ಥಿನಿಗೆ ಸೆಕ್ಸ್ ವಿಡಿಯೋ ತೋರಿಸಿ ಅತ್ಯಾಚಾರಗೈದ ಶಿಕ್ಷಕರು

Pinterest LinkedIn Tumblr


ಮುಂಬೈ: ದೇಶದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆಯೇ ಹೊರತಾಗಿ ಕಡಿಮೆ ಆಗುತ್ತಿಲ್ಲ. ಅದರಲ್ಲೂ ಇತ್ತೀಚೆಗೆ ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಯುತ್ತಿರುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಈ ಸಾಲಿಗೆ ಈಗ ಮಹಾರಾಷ್ಟ್ರದಲ್ಲಿ ಶಿಕ್ಷಕರೇ ವಿದ್ಯಾರ್ಥಿನಿಯನ್ನು ಗ್ಯಾಂಗ್ ರೇಪ್ ಮಾಡಿರುವ ಪ್ರಕರಣ ಕೂಡ ಸೇರಿಕೊಂಡಿದೆ.

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮಾರಥ್‍ವಾಡ ಪ್ರದೇಶದಲ್ಲಿ ಕಳೆದ 7 ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಇಬ್ಬರು ಶಿಕ್ಷಕರು ಸೇರಿ ಅತ್ಯಾಚಾರವೆಸಗಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ವಿಡಿಯೋ ತೋರಿಸುತ್ತೇವೆ ಎಂದು ಬಾಲಕಿಯನ್ನು ನಂಬಿಸಿ ಶಾಲೆಯ ಕೊಠಡಿಯೊಂದರಲ್ಲಿ ಆಕೆಗೆ ಸೆಕ್ಸ್ ವಿಡಿಯೋವನ್ನು ಶಿಕ್ಷಕರು ತೋರಿಸಿದ್ದರು. ಬಳಿಕ ಆಕೆಯನ್ನು ಅತ್ಯಾಚಾರಗೈದಿದ್ದರು. ಈ ಬಗ್ಗೆ ಬಾಲಕಿ ತನ್ನ ಪೋಷಕರ ಬಳಿ ತಿಳಿಸಿದಾಗ, ಹೆತ್ತವರು ಶಾಲೆಗೆ ಬಂದು ಮುಖ್ಯೋಪಾಧ್ಯಾಯರ ಬಳಿ ಶಿಕ್ಷಕರು ಬಗ್ಗೆ ದೂರಿದ್ದರು. ಅವರು ಯಾವುದೇ ಕ್ರಮ ತೆಗೆದುಕೊಳ್ಳದಿದ್ದಾಗ ಪೋಷಕರು ಪೊಲೀಸರ ಮೊರೆಹೋಗಿದ್ದರು.

ಕಾಮುಕ ಶಿಕ್ಷಕರ ಬಗ್ಗೆ ದೂರು ಕೊಟ್ಟಾಗ ಪೊಲೀಸರು ಕೂಡ ದೂರನ್ನು ಸ್ವೀಕರಿಸಿರಲಿಲ್ಲ. ಆದರೂ ಬಾಲಕಿಯ ಪೋಷಕರು ಮಾತ್ರ ತಮ್ಮ ಪ್ರಯತ್ನ ಬಿಡದೆ ಶಿಕ್ಷಕರ ವಿರುದ್ಧ ಹೋರಾಟಕ್ಕೆ ನಿಂತರು. ಕೊನೆಗೂ ಜ. 18ರಂದು ಪೊಲೀಸರು ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಇಬ್ಬರು ಶಿಕ್ಷಕರು ಕೂಡ ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಇತ್ತ ಬೆಂಗಳೂರಿನಲ್ಲಿ ಕೂಡ ಕಾಮುಕನೋರ್ವ 9 ವರ್ಷದ ಬಾಲಕಿಯನ್ನು ಅತ್ಯಚಾರ ಮಾಡಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಮುಂಜಾನೆ 4:30ರ ವೆಳೆಗೆ ಬಾತ್‍ರೂಮ್ ಕಿಟಕಿಯಿಂದ ಮನೆಗೆ ನುಗ್ಗಿದ್ದ ಕಾಮುಕ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದನು. ಆದರೆ ಬಾಲಕಿ ಕಿರುಚಾಟ ಕೇಳಿ ಮನೆಮಂದಿ ಎಚ್ಚರಗೊಂಡಿದ್ದು, ಆರೋಪಿಯಿಂದ ಬಾಲಕಿಯನ್ನು ರಕ್ಷಿಸಿದ್ದಾರೆ. ಆದರೆ ಆರೋಪಿ ಮಾತ್ರ ಅವರಿಂದ ತಪ್ಪಿಸಿಕೊಂಡು ಬಾತ್‍ರೂಮ್ ಕಿಟಕಿಯಿಂದಲೇ ಪರಾಗಿಯಾಗಿದ್ದಾನೆ.

ಅಷ್ಟೇ ಅಲ್ಲದೆ ಮುಂಬೈನಲ್ಲಿ ಇಬ್ಬರು ವಿಕಲಚೇತನ ಬಾಲಕಿಯರನ್ನು ಮನೆಗೆ ಬಿಡುವ ನೆಪದಲ್ಲಿ ಬಸ್ ಚಾಲಕ ಹಾಗೂ ಕ್ಲೀನರ್ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಚಾಲಕನನ್ನು ಬಂಧಿಸಿದ್ದು, ಇನ್ನೋರ್ವ ಆರೋಪಿಗಾಗಿ ಬಲೆ ಬೀಸಿದ್ದಾರೆ.

Comments are closed.