ಮನೋರಂಜನೆ

ಆ್ಯಸಿಡ್ ಸಂತ್ರಸ್ತೆಯ ನೈಜ ಕಥೆಯೇ ಛಪಾಕ್

Pinterest LinkedIn Tumblr


ಮುಂಬೈ: ಪದ್ಮಾವತ್ ಬಳಿಕ ದೀಪಿಕಾ ಪಡುಕೋಣೆ ನಟನೆಯ ಛಪಾಕ್ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಟ್ರೈಲರ್ ರಿಲೀಸ್ ಗೊಂಡ ಕೆಲವೇ ಕ್ಷಣಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಮಹಾಪೂರವೇ ಚಿತ್ರತಂಡಕ್ಕೆ ಹರಿದು ಬರುತ್ತಿದೆ. ಟ್ರೈಲರ್ ನೋಡುಗರ ರೋಮಗಳಲ್ಲಿ ರೋಮಾಂಚನ ತರುವಲ್ಲಿ ಯಶಸ್ವಿಯಾಗಿದ್ದು, ಕೊನೆಗೆ ನಾವು ಸಿನಿಮಾ ನೋಡಲೇಬೇಕೆಂಬ ತುಡಿತವನ್ನು ಉಂಟು ಮಾಡುವಲ್ಲಿ ಛಪಾಕ್ ಯಶಸ್ವಿಯಾಗಿದೆ.

ಮದುವೆ ಬಳಿಕ ದೀಪಿಕಾ ನಟಿಸಿರುವ ಮೊದಲ ಚಿತ್ರ ಇದಾಗಿದ್ದು, ಈ ಬಾರಿ ಆ್ಯಸಿಡ್ ದಾಳಿಗೆ ಒಳಗಾದ ಮಾಲತಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ವಿಷಯಗಳಿಗೆ ಚಿತ್ರ ಸದ್ದು ಮಾಡಿಕೊಂಡು ಬರುತ್ತಿದೆ. ದೀಪಿಕಾ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾದ ದಿನವೇ ಚಿತ್ರ ಭರವಸೆಯನ್ನು ಮೂಡಿಸಿತ್ತು. ಪ್ರತಿ ಸಿನಿಮಾಗಳನ್ನು ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುವ ದೀಪಿಕಾ ಮತ್ತೊಮ್ಮೆ ಆ ವಿಷಯದಲ್ಲಿ ಸೈ ಅನ್ನಿಸಿಕೊಂಡಿದ್ದಾರೆ.

ಓದಬೇಕೆಂಬ ದೊಡ್ಡ ಕನಸು ಕಂಡ ಯುವತಿಯ ಮೇಲೆ ದುಷ್ಕರ್ಮಿಗಳ ಆ್ಯಸಿಡ್ ದಾಳಿ. ಸ್ಪುರದ್ರೂಪಿಯಾಗಿದ್ದ ಯುವತಿ ತನ್ನನ್ನ ಕನ್ನಡಿಯಲ್ಲಿ ನೋಡಿಕೊಂಡು ಭಯಬೀಳುವ ದೃಶ್ಯಗಳು ನೋಡುಗರ ಮನ ಮುಟ್ಟುವಂತಿವೆ. ಆ್ಯಸಿಡ್ ದಾಳಿ ಬಳಿಕ ಮನೆಯಿಂದ ಹೊರ ಬರಲು ಹಿಂಜರಿತ, ಆಕೆಯ ಬೆನ್ನಲುಬಾಗಿ ನಿಲ್ಲುವ ಹೋರಾಟಗಾರ್ತಿಯರು, ಸ್ನೇಹಿತರ ಬಾಂಧವ್ಯವನ್ನು ಚಿತ್ರತಂಡ ತೋರಿಸಿರೋದು ಕಣ್ಣಿಗೆ ಕಟ್ಟುವಂತಿದೆ.

ಆಸ್ಪತ್ರೆಯಿಂದ ಮನೆಗೆ ಆಗಮಿಸುವ ಮಾಲತಿ ತನ್ನ ಎಲ್ಲ ಕಿವಿಯೊಲೆ, ಮೂಗುತಿ ತೆಗೆದಿಡುವಾಗ ಮೂಗು, ಕಿವಿ ಇಲ್ಲ, ಹೇಗೆ ಈ ಆಭರಣಗಳನ್ನ ಧರಿಸಲಿ ಎಂದು ಹೇಳುವ ಮಾತು ನೋಡಗರಿಗೆ ಸಂತ್ರಸ್ತೆಯ ಕತ್ತಲೆಯ ಬದುಕುನ್ನು ಪರಿಚಯಿಸುತ್ತದೆ. ಧೈರ್ಯಗುಂದದೇ ನ್ಯಾಯಕ್ಕಾಗಿ ಹೋರಾಟ, ಸಮಾಜ ಸಂತ್ರಸ್ತೆಯನ್ನು ಕಾಣುವ ದೃಷ್ಟಿ, ಕಷ್ಟಗಳ ಸಂಕೋಲೆಯಲ್ಲಿ ಬದುಕುತ್ತಿದ್ದ ಜೀವಕ್ಕೆ ಗೆಳೆಯನ ತಂಪಾದ ಆಸರೆ ಎಲ್ಲವೂ ಟ್ರೈಲರ್ ನಲ್ಲಿದೆ.

ತನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದವರ ಹೋರಾಟ ನಡೆಸುವ ಮಾಲತಿಗೆ ನ್ಯಾಯ ಸಿಗುತ್ತಾ? ಕತ್ತಲೆಯಲ್ಲಿ ಹೊಂಗಿರಣವಾಗಿ ಬಂದ ಗೆಳೆಯನ ಆಸರೆ ಮಾಲತಿಗೆ ಸಿಗುತ್ತಾ? ಮತ್ತೆ ಮಾಲತಿ ಬದುಕು ಎಲ್ಲರಂತೆ ನಡೆಯುತ್ತಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಬೇಕಾದ್ರೆ ಜನವರಿ 10ರವರೆಗೆ ನೀವು ಕಾಯಬೇಕು. ಚಿತ್ರ ಜನವರಿ 10 ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

Comments are closed.