
ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಮಹಾ ಮೈತ್ರಿ ಸರಕಾರ ರಚನೆ ಅಂತಿಮ ಹಂತದಲ್ಲಿದೆ. ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ನಾಯಕರು ಮುಂಬಯಿಯಲ್ಲಿ ಸಮಾಲೋಚನೆ ನಡೆಸಿದ್ದಾರೆ. ಆದರೆ ಈ ಮಾತುಕತೆ ಅಪೂರ್ಣವಾಗಿದ್ದು, ಮತ್ತೆ ಮುಂದುವರಿಯುವ ಸಾಧ್ಯತೆ ಇದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಸಿಪಿ ನಾಯಕ ಶರದ್ ಪವಾರ್, ಶಿವಸೇನೆಯ ಉದ್ಧವ್ ಠಾಕ್ರೆ ಅವರನ್ನೇ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಮಾಡಲು ಸಭೆಯಲ್ಲಿ ಒಮ್ಮತ ಮೂಡಿದೆ ಎಂದರು.
ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಸರಕಾರ ರಚನೆಗೆ ಹಕ್ಕು ಮಂಡಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರ ರಾತ್ರಿಯೇ ರಾಜ್ಯಪಾಲರನ್ನು ಭೇಟಿ ಮಾಡಿ ಹಕ್ಕು ಮಂಡಿಸುವ ಸಾಧ್ಯತೆ ಇದೆ.
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಶುಕ್ರವಾರ ಸಂಜೆ ಅಂತಿಮ ಸುತ್ತಿನ ಮಾತುಕತೆ ನಡೆಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಸಿಪಿ ನಾಯಕ ನವಾಬ್ ಮಲಿಕ್, ಮುಖ್ಯಮಂತ್ರಿ ಪಟ್ಟ ಶಿವಸೇನೆಗೆ ದೊರೆಯಲಿದೆ. ಐದು ವರ್ಷಗಳ ಕಾಲ ಸಿಎಂ ಬದಲಾವಣೆ ಇರುವುದಿಲ್ಲ ಎಂದರು.
ಸರಕಾರ ಐದು ವರ್ಷ ಸುಸೂತ್ರವಾಗಿ ಹಾಗೂ ಸುಭದ್ರವಾಗಿ ಆಡಳಿತ ನಡೆಸುವುದೇ ಮುಖ್ಯ ಗುರಿ ಎಂದು ನವಾಬ್ ಮಲಿಕ್ ತಿಳಿಸಿದರು.
Comments are closed.