ಮುಂಬೈ

ಸೋನಿಯಾ, ಪವಾರ್ ಭೇಟಿ ರದ್ದು: ಬಗೆಹರಿಯದ ಸರ್ಕಾರ ರಚನೆ ಬಿಕ್ಕಟ್ಟು

Pinterest LinkedIn Tumblr


ಮುಂಬೈ: ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಪ್ಪಂದವಾಗಿದೆ ಎಂದು ಕಾಂಗ್ರೆಸ್ , ಎನ್ ಸಿಪಿ ಹಾಗೂ ಶಿವಸೇನೆ ಹೇಳುತ್ತಿದ್ದರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಇನ್ನೂ ಅನಿಶ್ಚತತೆಯಿಂದ ಕೂಡಿದೆ.

ಇಂದು ನಡೆಯಬೇಕಿದ್ದ ಮೂರು ಪಕ್ಷಗಳ ನಾಯಕರೊಂದಿಗಿನ ರಾಜ್ಯಪಾಲರ ಸಭೆ ರದ್ದುಗೊಂಡಿರುವ ಬೆನ್ನಲ್ಲೇ, ಎನ್ ಸಿಪಿ ಮುಖ್ಯಸ್ಥ ಶರದ್ ಯಾದವ್ ಪ್ರಸ್ತಾಪಿಸಿದ್ದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆಗಿನ ಸಭೆಯ ಬಗ್ಗೆ ಕೂಡಾ ಗೊಂದಲ ಉಂಟಾಗಿದೆ.

ಸೋಮವಾರ ಅಥವಾ ಮಂಗಳವಾರ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಹಾರಾಷ್ಟ್ರ ಸರ್ಕಾರ ರಚನೆ ಕುರಿತಂತೆ ಚರ್ಚಿಸಲಿದ್ದಾರೆ ಎನ್ನಲಾಗಿತ್ತು. ಆ ಮೂಲಕ ಬಾಳಾ ಸಾಹೇಬ್ ಠಾಕ್ರೆ ಅವರ ಏಳನೇ ಪುಣ್ಯ ಸ್ಮರಣೆ ಸಮಾರಂಭದ ವೇಳೆಯಲ್ಲಿ ಶಕ್ತಿ ಪ್ರದರ್ಶನಕ್ಕೂ ಶಿವಸೇನೆ ಮುಂದಾಗಿತ್ತು.

ಆದರೆ, ಈ ಸಭೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಶೀಘ್ರದಲ್ಲಿಯೇ ರಾಜ್ಯಪಾಲರ ಭೇಟಿಗಾಗಿ ಹೊಸದಾಗಿ ಮತ್ತೆ ಅನುಮತಿ ಕೋರಲಾಗುವುದು ಎಂದು ಶಿವಸೇನಾ ಮುಖಂಡ ಏಕಾನಾಥ್ ಶಿಂಧೆ ಹೇಳಿದ್ದಾರೆ.

ಭಾನುವಾರ ಸಂಜೆ ಸೋನಿಯಾ ಹಾಗೂ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಭೇಟಿಯಾಗಲಿದ್ದು, ಸರ್ಕಾರ ರಚನೆ ಸಂಬಂಧ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ, ಇಂತಹ ಯಾವುದೇ ಮಾತುಕತೆ ನಿಗದಿಯಾಗಿಲ್ಲ. ಸೋಮವಾರ ಅಥವಾ ಮಂಗಳವಾರ ಇತರ ಕಾಂಗ್ರೆಸ್ ಮುಖಂಡರನ್ನು ಶರದ್ ಪವಾರ್ ಭೇಟಿಯಾಗಲಿದ್ದಾರೆ ಎಂದು ಮುಂಬೈ ಎನ್ ಸಿಪಿ ಮುಖಂಡ ನವಾಬ್ ಮಲ್ಲಿಕ್ ತಿಳಿಸಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ರಾಜ್ಯ ಅಧ್ಯಕ್ಷರ ಕುರಿತಂತೆ ನಡೆಯುತ್ತಿರುವ ಪಕ್ಷದ ಸಭೆಯ ನಂತರ ಮಹಾರಾಷ್ಟ್ರ ಸರ್ಕಾರ ರಚನೆ ಕುರಿತಂತೆ ಸೋನಿಯಾ ಗಾಂಧಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ರಾಜೀವ್ ಸತಾವ್ ತಿಳಿಸಿದ್ದಾರೆ.

Comments are closed.