ಮುಂಬೈ

ಮಹಾರಾಷ್ಟ್ರದ 2 ನಗರಪಾಲಿಕೆ ಚುನಾವಣೆ: ಬಿಜೆಪಿಗೆ ಭರ್ಜರಿ ಜಯ; ಎನ್​ಸಿಪಿ, ಕಾಂಗ್ರೆಸ್​ಗೆ ಮುಖಭಂಗ; ಶಿವಸೇನೆಗೆ ನಿರಾಸೆ

Pinterest LinkedIn Tumblr


ಮುಂಬೈ: ಮಹಾರಾಷ್ಟ್ರದ ಜಲಗಾಂವ್ ಮತ್ತು ಸಾಂಗ್ಲಿ ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ಒಂದು ಕಡೆ ಜಲಗಾಂವ್ ನಗರಪಾಲಿಕೆಯನ್ನು ಉಳಿಸಿಕೊಂಡಿದೆ, ಇನ್ನೊಂದೆಡೆ ಸಾಂಗ್ಲಿ-ಮೀರಜ್-ಕುಪ್ವಾಡ ನಗರಪಾಲಿಕೆಯನ್ನ ಕಾಂಗ್ರೆಸ್ ಕೈಯಿಂದ ಕಸಿದುಕೊಂಡಿದೆ. ಜಲಗಾಂವ್​ನ 75 ವಾರ್ಡ್​ಗಳ ಪೈಕಿ ಬಿಜೆಪಿ 57 ಸ್ಥಾನಗಳಲ್ಲಿ ಜಯಭೇರಿ ಭಾರಿಸಿದೆ. ಇನ್ನು, ಸಾಂಗ್ಲಿಯ 78 ವಾರ್ಡ್​ಗಳಲ್ಲಿ ಬಿಜೆಪಿ 41ರಲ್ಲಿ ಗೆದ್ದು ಪಾಲಿಕೆಯ ಆಡಳಿತದ ಅಧಿಕಾರ ಪಡೆದಿದೆ.

ಈ ಎರಡು ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಪ್ರಾಬಲ್ಯ ಕಳೆದ ಬಾರಿಗಿಂತ ಹೆಚ್ಚಾಗಿದೆ. ಸಾಂಗ್ಲಿ-ಮೀರಜ್-ಕುಪ್ವಾಡ ನಗರಪಾಲಿಕೆಯಲ್ಲಿ ಕಳೆದ ಬಾರಿ ಶೂನ್ಯ ಸಂಪಾದನೆ ಮಾಡಿದ್ದ ಬಿಜೆಪಿ ಈ ಬಾರಿ ಬಹುಮತ ಗಳಿಸುವ ಹಂತಕ್ಕೆ ಹೋಗಿದ್ದು ಗಮನಾರ್ಹ. ಇನ್ನು, ಜಲಗಾಂವ್​ನಲ್ಲಿ ಕಳೆದ ಬಾರಿ ಬಿಜೆಪಿ ಗಳಿಸಿದ್ದು ಕೇವಲ 15 ಸೀಟು ಮಾತ್ರ. ಪಕ್ಷೇತರರು ಹಾಗೂ ಸಣ್ಣಪುಟ್ಟ ಪಕ್ಷಗಳ ಬೆಂಬಲದೊಂದಿಗೆ ಬಿಜೆಪಿಯು ಪಾಲಿಕೆಯ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಆದರೆ ಈ ಬಾರಿ ಯಾವ ಪಕ್ಷದ ನೆರವೇ ಇಲ್ಲದೇ ಬಿಜೆಪಿಯೇ ಸ್ವಂತವಾಗಿ ಬಹುಮತ ಸಾಧಿಸಿದೆ.

ಈ ಎರಡು ಪಾಲಿಕೆಯಲ್ಲಿ ಹೆಚ್ಚು ನಷ್ಟ ಅನುಭವಿಸಿದ್ದು ಕಾಂಗ್ರೆಸ್ ಮತ್ತು ಎನ್​ಸಿಪಿ ಪಕ್ಷಗಳೇ. ಸಾಂಗ್ಲಿ ಪಾಲಿಕೆಯಲ್ಲಿ ಎನ್​ಸಿಪಿ ಮತ್ತು ಕಾಂಗ್ರೆಸ್ ಎರಡೂ ಸೇರಿ ಗಳಿಸಿದ್ದು 35 ಸೀಟು ಮಾತ್ರ. ಆದರೆ, ಕಳೆದುಕೊಂಡಿದ್ದು ಬರೋಬ್ಬರಿ 25 ಸ್ಥಾನಗಳನ್ನ. ಜಲಗಾಂವ್​ನಲ್ಲಿ ಈ ಎರಡೂ ಜಾತ್ಯತೀತ ಪಕ್ಷಗಳು ಶೂನ್ಯ ಸಂಪಾದನೆ ಮಾಡಿವೆ. ಜಲಗಾಂವ್ ಮತ್ತು ಸಾಂಗ್ಲಿಯಲ್ಲಿ ಬಿಜೆಪಿ ಕಳೆದ ಬಾರಿಗಿಂತ 83 ಸ್ಥಾನಗಳನ್ನು ಹೆಚ್ಚು ಪಡೆದುಕೊಂಡು ಮಿಂಚಿದೆ. ಕಳೆದ ಬಾರಿ ಜಲಗಾಂವ್​ನಲ್ಲಿ ಸೊನ್ನೆ ಸುತ್ತಿದ್ದ ಶಿವಸೇನೆ ಈ ಬಾರಿ 15 ಸೀಟು ಗೆಲ್ಲಲು ಸಫಲವಾಗಿದೆ. ಆದರೆ, ಬಿಜೆಪಿಯನ್ನು ದೊಡ್ಡಣ್ಣನಾಗಿ ಒಪ್ಪಿಕೊಳ್ಳಲು ಸಿದ್ಧವಿಲ್ಲದೇ ಸಿಡಿಗುಟ್ಟುತ್ತಿರುವ ಶಿವಸೇನೆಗೆ ಈ ಎರಡು ಚುನಾವಣೆಯ ಫಲಿತಾಂಶ ನಿರಾಶೆ ತಂದಿದೆ.

Comments are closed.