ಮುಂಬೈ

ಭಾರೀ ಮಳೆಗೆ ಮುಳುಗಿದ ಮುಂಬೈ: ಮೂವರ ಸಾವು: ರೈಲು, ವಿಮಾನ, ವಾಹನ ಸಂಚಾರ ವ್ಯತ್ಯಯ

Pinterest LinkedIn Tumblr


ಮುಂಬೈ: ಸತತ 3 ದಿನದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮುಂಬೈನ ಜನಜೀವನ ಅಸ್ತವ್ಯಸ್ತಗೊಂಡಿದೆ. ಅತಿಯಾದ ಮಳೆಯಿಂದ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಮುಂಬೈನ ಬಹುತೇಕ ಏರಿಯಾಗಳು ಮುಳುಗಡೆಯಾಗಿದೆ. ಇಲ್ಲಿನ ಚುನಾಬತ್ತಿ, ವಡಾಲಾ, ದಡಾರ್​, ಮಲಾದ್​, ಕುರ್ಲ ಮುಂತಾದ ರಸ್ತೆಗಳು ಪ್ರವಾಹದಿಂದ ಮುಳುಗಿಹೋಗಿವೆ. ಒಂದು ಅಂದಾಜಿನ ಪ್ರಕಾರ ಕಳೆದ ಒಂದು ದಿನದಲಲ್ಲಿ ಮುಂಬೈನಲ್ಲಿ 231 ಮಿ.ಮೀ. ಮಳೆಯಾಗಿದೆ. ಈ ವರ್ಷ ಮುಂಬೈನಲ್ಲಿ ಸುರಿದ ಅತ್ಯಧಿಕ ಮಳೆ ಇದಾಗಿದೆ.

ಮಳೆಯಿಂದಾಗಿ ಇದುವರೆಗೂ ಮೂವರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಅನೇಕ ಮರಗಳು ಧರೆಗುರುಳಿವೆ. ದಕ್ಷಿಣ ಮುಂಬೈ ಭಾಗದಲ್ಲಿ ಬೃಹತ್​ ಕಟ್ಟಡದ ಕಾಂಪೌಂಡ್​ನ ಅರ್ಧ ಭಾಗ ಕುಸಿದಿರುವ ಕಾರಣ ಪಾರ್ಕ್​ ಮಾಡಿದ್ದ 12 ಕಾರುಗಳು ಡ್ಯಾಮೇಜ್​ ಆಗಿವೆ ಎಂದು ಐಎಎನ್​ಎಸ್​ ತಿಳಿಸಿದೆ.

ಮಳೆಯಿಂದ ರಸ್ತೆಯಲ್ಲೆಲ್ಲ ನೀರು ತುಂಬಿದ್ದು, ಸೋಮವಾರ ಆಫೀಸಿಗೆ ಹೋಗುವವರ ಸಂಖ್ಯೆ ಹೆಚ್ಚಿದ್ದರಿಂದ ಟ್ರಾಫಿಕ್​ ನಿಯಂತ್ರಿಸಲು ಪೊಲೀಸರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಎಲ್ಲೆಡೆ ಟ್ರಾಫಿಕ್​ ಜಾಮ್​ನಿಂದ ಜನ ಪರದಾಡುವಂತಾಯಿತು.

ಗುಜರಾತ್​ ಕಡೆಗೆ ಮಳೆಯಾಗುವ ಸಾಧ್ಯತೆ:

ನಿಲ್ಲದೆ ಸುರಿಯುತ್ತಿರುವ ಮಳೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಇಂಡಿಯ ಮೆಟೆರಾಲಾಜಿಕಲ್​ ಡಿಪಾರ್ಟಮೆಂಟ್​ ತಿಳಿಸಿದೆ. ಮುಂಬೈನ ನಗರಗಳಲ್ಲಿ ಮಾತ್ರವಲ್ಲದೆ ಕೊಂಕಣ ಮತ್ತು ಗುಜರಾತ್​, ಮಹಾರಾಷ್ಟ್ರ, ಕರ್ನಾಟಕದ ಕರಾವಳಿ ಭಾಗ, ಕೇರಳ, ಗೋವಾದಲ್ಲಿಯೂ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯೂ ತಿಳಿಸಿದೆ.

ವಿಮಾನ, ರೈಲು ಸಂಚಾರ ವಿಳಂಬ:

ಏರ್​ಪೋರ್ಟ್​ನ ರನ್​ವೇ ನೀರಿನಲ್ಲಿ ಮುಳುಗಿದ ಕಾರಣ ನಿನ್ನೆ ಮುಂಬೈ ಏರ್​ಪೋರ್ಟ್​ನಲ್ಲಿ ಇಳಿಯಬೇಕಾಗಿದ್ದ ವಿಮಾನ 30 ನಿಮಿಷ ತಡವಾಗಿ ಲ್ಯಾಂಡ್​ ಆಯಿತು. ಮಳೆಯಿಂದಾಗಿ 35ಕ್ಕೂ ಅಧಿಕ ವಿಮಾನಗಳು ತಡವಾಗಿ ಲ್ಯಾಂಡ್​ ಆದವು. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಮುಚ್ಚಿರುವ ಕಾರಣ ಬಹುತೇಕ ಜನರು ಸಂಚರಿಸಲು ಸ್ಥಳೀಯ ರೈಲನ್ನೇ ಅವಲಂಬಿಸಿದ್ದಾರೆ. ಆದರೆ, ಹಳಿಗಳ ಮೇಲೂ ನೀರು ಬರುವ ಸಾಧ್ಯತೆ ಇರುವುದರಿಂದ ರೈಲ್ವೆ ಸಿಬ್ಬಂದಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

Comments are closed.