ಮನೋರಂಜನೆ

ಬಾಲಿವುಡ್ ನಟ ಅರ್ಬಾಜ್‌ ಖಾನ್‌ಗೆ ಐಪಿಎಲ್‌ ಬೆಟ್ಟಿಂಗ್‌ ತನಿಖೆಗೆ ಸಂಬಂಧಿಸಿ ಸಮನ್ಸ್‌

Pinterest LinkedIn Tumblr


ಮುಂಬಯಿ : ಬಾಲಿವುಡ್‌ ಚಿತ್ರ ನಿರ್ಮಾಪಕ ಮತ್ತು ನಟ ಅರ್ಬಾಜ್‌ ಖಾನ್‌ ಗೆ ಥಾಣೆ ಪೊಲೀಸರು ಐಪಿಎಲ್‌ ಬೆಟ್ಟಿಂಗ್‌ ತನಿಖೆಗೆ ಸಂಬಂಧಿಸಿ ಸಮನ್ಸ್‌ ನೀಡಿದ್ದಾರೆ.

ಐಪಿಎಲ್‌ ಬೆಟ್ಟಿಂಗ್‌ ಹಗರಣಕ್ಕೆ ಸಂಬಂಧಿಸಿ ಪೊಲೀಸರು ಕುಖ್ಯಾತ ಬುಕ್ಕಿ ಸೋನು ಜಲಾನ್‌ ಎಂಬಾತನನ್ನು ಬಂಧಿಸಿದ್ದರು. ಆತನನ್ನು ತನಿಖೆಗೆ ಗುರಿಪಡಿಸಿದಾಗ ಆತ ಅರ್ಬಾಜ್‌ ಖಾನ್‌ ಹೆಸರನ್ನು ಉಚ್ಚರಿಸಿದ. ಆ ಪ್ರಕಾರ ಪೊಲೀಸರು ನಾಳೆ ಶನಿವಾರ ಅರ್ಬಾಜ್‌ ಖಾನ್‌ ಗೆ ಠಾಣೆ ಬಂದು ತನಿಖೆಯನ್ನು ಎದುರಿಸುವಂತೆ ಸಮನ್ಸ್‌ ಜಾರಿ ಮಾಡಿದರು.

ಮೂಲಗಳಿಂದ ತಿಳಿದು ಬಂದ ಪ್ರಕಾರ ಜಲಾನ್‌ ಕೈಯಲ್ಲಿ ಅರ್ಬಾಜ್‌ ಖಾನ್‌ ಕುರಿತ ಒಂದು ಬೆಟ್ಟಿಂಗ್‌ ವಿಡಿಯೋ ಇದೆ; ಅದನ್ನು ಬಳಸಿಕೊಂಡು ಆತ ಅರ್ಬಾಜ್‌ನನ್ನು ಬ್ಲಾಕ್‌ ಮೇಲ್‌ ಮಾಡುತ್ತಿದ್ದ. ಆದರೆ ಆ ವಿಡಿಯೋ ವಿವರಗಳು ಸಿಕ್ಕಿಲ್ಲ ಎನ್ನಲಾಗಿದೆ.

ಜಲಾನ್‌ ಗೂ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಗೂ ನಂಟಿರುವ ಕಾರಣಕ್ಕೆ ಆತನ ಬಂಧನವಾಗಿರುವುದು ಪೊಲೀಸರಿಗೆ ದೊರಕಿರುವ ಮಹತ್ತರ ಗೆಲುವೆಂದು ತಿಳಿಯಲಾಗಿದೆ.

ಜಲಾನ್‌ ಗೆ ಮುಂಬಯಿಯಲ್ಲಿ ಮೂರು ಫ್ಲಾಟುಗಳಿದ್ದು ಅವುಗಳಿಂದ ಆತನಿಗೆ ನಿರಂತರ ಆದಾಯವಿದೆ. ಆತನ ಬಳಿ ಇರುವ ಐಷಾರಾಮಿ ವಾಹನಗಳ ಪಟ್ಟಿ ಸಾಕಷ್ಟು ದೊಡ್ಡದೇ ಇದೆ.

ಜಲಾನ್‌ನ ನಿವಾಸಗಳ ಮೇಲಿನ ದಾಳಿಯಲ್ಲಿ ಪೊಲೀಸರಿಗೆ ಸಿಕ್ಕಿರುವ ಡೈರಿಯೊಂದರಲ್ಲಿ ಆತನಿಗೆ 2018ರ ಐಪಿಎಲ್‌ ಋತುವಿನ ಬೆಟ್ಟಿಂಗ್‌ನಿಂದಲೇ 500 ಕೋಟಿ ರೂ. ಹಣ ಬಂದಿರುವುದು ಬಹಿರಂಗವಾಗಿದೆ. ಇದರಲ್ಲಿ 10 ಕೋಟಿ ರೂ. ಚೆನ್ನೈ ಮತ್ತು ಹೈದರಾಬಾದ್‌ ನಡುವಿನ ಐಪಿಎಲ್‌ ಫೈನಲ್‌ ಪಂದ್ಯದ ಬೆಟ್ಟಿಂಗ್‌ನಿಂದಲೇ ಬಂದಿದೆ ಎಂದು ಗೊತ್ತಾಗಿದೆ.

Comments are closed.