ಮನೋರಂಜನೆ

ಸಲ್ಮಾನ್ ಖಾನ್ ಹಿಟ್ ಆಂಡ್ ರನ್ ಪ್ರಕರಣ; ಮಹಾರಾಷ್ಟ್ರ ಸರ್ಕಾರದ ಬಳಿ ಯಾವುದೇ ಮಾಹಿತಿ ಇಲ್ಲ: ದಾಖಲೆ ಭಸ್ಮ

Pinterest LinkedIn Tumblr

salmankhan

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ 2002ರ ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದ ಬಳಿ ಯಾವುದೇ ಮಾಹಿತಿ ಇಲ್ಲ. ಏಕೆಂದರೆ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳೆಲ್ಲವೂ ಅಗ್ನಿ ಆಕಸ್ಮಿಕದಲ್ಲಿ ಸುಟ್ಟು ಹೋಗಿವೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

ಪ್ರಕರಣದ ಮಾಹಿತಿ ಕೋರಿ ಆರ್‌ಟಿಐ ಕಾರ್ಯಕರ್ತ ಮನ್ಸೂರ್ ದರ್ವೇಶ್ ಅವರು ರಾಜ್ಯ ಕಾನೂನು ಮತ್ತು ನ್ಯಾಯಾಂಗ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿರುವ ಮಹಾ ಸರ್ಕಾರ, ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹಿಂದೆ ನಡೆದಿದ್ದ ಅಗ್ನಿ ಆಕಸ್ಮಿಕದಲ್ಲಿ ಸಲ್ಮಾನ್‌ ಖಾನ್‌ ಪ್ರಕರಣದ ಕಡತಗಳು ಕೂಡ ಭಸ್ಮವಾಗಿರುವುದಾಗಿ ಮಾಹಿತಿ ನೀಡಿದೆ.

ಜೂನ್ 21, 2012ರಂದು ಮಹಾರಾಷ್ಟ್ರದ ಮಂತ್ರಾಲಯದಲ್ಲಿ (ವಿಧಾನಸಭೆ) ನಡೆದಿದ್ದ ಅಗ್ನಿ ಅನಾಹುತದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳು ಕೂಡ ಸುಟ್ಟು ಹೋಗಿರುವುದರಿಂದ ಮಾಹಿತಿ ಲಭ್ಯವಿಲ್ಲ ಎಂದು ಅರ್ಜಿದಾರರಿಗೆ ತಿಳಿಸಲಾಗಿದೆ.

ಮೇ 6 2002ರಂದು ನಡೆದ ಹಿಟ್ ಆಂಡ್ ರನ್ ಘಟನೆ ನಡೆದಂದಿನಿಂದ ಹಿಡಿದು ಈ ವರ್ಷದ ಸೆಷೆನ್ಸ್ ಕೋರ್ಟ್ ತೀರ್ಪು ನೀಡುವವರೆಗೆ ಪ್ರಕರಣದ ನಿರ್ವಹಣೆಗೆ ರಾಜ್ಯ ಸರಕಾರ ಮಾಡಿರುವ ಖರ್ಚು ಎಷ್ಟು ಎಂದು ಕೂಡ ಅರ್ಜಿದಾರರು ಕೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಗೊತ್ತಿರುವುದು ಏಕೈಕ ಮಾಹಿತಿ ಮಾತ್ರ. ಅದರ ಪ್ರಕಾರ, ಪಬ್ಲಿಕ್‌ ಪ್ರಾಸಿಕ್ಯೂಟರ್ ಪ್ರದೀಪ್ ಘರಟ್ ಅವರಿಗೆ ಪ್ರತಿ ಬಾರಿಯ ವಿಚಾರಣೆಗೆ ತಲಾ ಆರು ಸಾವಿರ ರು. ನೀಡಲಾಗಿದೆ.

ಅಗ್ನಿ ಆಕಸ್ಮಿಕದಲ್ಲಿ ಬೆಂಕಿಗಾಹುತಿಯಾಗಿರುವ ಕಡತಗಳನ್ನು ಮರು ನಿರ್ಮಾಣ ಮಾಡುವುದಾಗಿ ರಾಜ್ಯ ಸರಕಾರ ಹೇಳಿಕೆ ನೀಡಿತ್ತು. ಆದರೆ ಈವರೆಗೂ ಆ ಕೆಲಸ ಆಗಿಲ್ಲ. ಇದು ಸಕರಾರ ಅದಕ್ಷತೆಗೆ ಸಾಕ್ಷಿಯಾಗಿದೆ. ನಮಗೆ ಹಿಟ್ ಆಂಡ್ ರನ್ ಪ್ರಕರಣದ ಬಗ್ಗೆ ತಾರ್ಕಿಕ ಅಂತ್ಯಕ್ಕೆ ಬರಲು ಸೂಕ್ತ ದಾಖಲೆಗಳು ಬಹಳ ಮಹತ್ವದ್ದಾಗಿದೆ ಎಂದು ಅರ್ಜಿದಾರ ಮನ್ಸೂರ್ ದರ್ವೇಶ್ ಹೇಳಿದ್ದಾರೆ.

Write A Comment