ಬೆಂಗಳೂರು: ಇತ್ತೀಚೆಗಷ್ಟೇ ಎಸಿಬಿ ದಾಳಿಗೊಳಗಾಗಿದ್ದ ಕೆಎಎಸ್ ಅಧಿಕಾರಿ ಎಲ್.ಸಿ ನಾಗರಾಜ್ ಅವರ ಪತ್ನಿ ಗುರುವಾರ ನಿಧನರಾಗಿದ್ದಾರೆ.
ತೀವ್ರ ಹೃದಯಾಘಾತದಿಂದ ನಾಗರತ್ನಮ್ಮ(53) ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಎಲ್.ಸಿ ನಾಗರಾಜ್ ಅವರ ನೆಲಮಂಗಲ ಪರಮಣ್ಣ ಬಡಾವಣೆಯಲ್ಲಿನ ನಿವಾಸದ ಮೇಲೆ ಇತ್ತೀಚೆಗೆ ಎಸಿಬಿ ದಾಳಿಯಾಗಿತ್ತು. ಐಎಂಎ ಪ್ರಕರಣದ ಆರೋಪಿಯೂ ಆಗಿರುವ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜ್ ಹಾಗೂ ಸಂಬಂಧಿಗಳ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣದ ನಗದು ಮತ್ತು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.
ದಾಳಿ ಬಗ್ಗೆ ಮಾತನಾಡಿದ್ದ ನಾಗರಾಜ್, ಹಿರಿಯ ಅಧಿಕಾರಿಯೊಬ್ಬರು ಉದ್ದೇಶಪೂರ್ವಕವಾಗಿ ದಾಳಿ ಮಾಡಿಸಿದ್ದಾರೆ. ನಾನು ಪ್ರಾಮಾಣಿಕವಾಗಿ ಇದ್ದು ಪದೇ ಪದೇ ನನ್ನ ಮೇಲೆ ದಾಳಿ ಮಾಡಲಾಗುತ್ತಿದೆ. ದಾಳಿಗೆ ಭಯ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ನನ್ನನ್ನು ಗುರಿಯಾಗಿಸಿ ಇದು 3 ನೇ ಬಾರಿ ದಾಳಿ ಮಾಡಲಾಗಿದೆ. 43 ಲಕ್ಷ ರೂ. ಹಣಕ್ಕೆ ದಾಖಲಾತಿಗಳು ಇವೆ. ನನ್ನ ಪತ್ನಿಗೆ ಸಂಬಂಧಿಸಿದ ಆಸ್ತಿ ಮಾರಾಟ ಮಾಡಲು ಯತ್ನಿಸಿದ್ದೆ. 2.4 ಕೋಟಿಗೆ ಆಸ್ತಿ ಮಾರಾಟ ಮಾಡಿದ್ದೆ. ಅದರ ಹಣವನ್ನು ನಾನು ಪಡೆದಿದ್ದೆ. ಎಲ್ಲಾ ಕೂಡ ವೈಟ್ ಎಂದು ಸ್ಪಷ್ಟಪಡಿಸಿದ್ದರು. ಎಸಿಬಿ ದಾಳಿ ಘಟನೆಗಳಿಂದ ಪತ್ನಿ ನೊಂದಿದ್ದರು ಎನ್ನಲಾಗಿದೆ.