ಕರ್ನಾಟಕ

ನಾಡಿನೆಲ್ಲೆಡೆ ಆಯುಧಪೂಜೆ, ವಿಜಯದಶಮಿ ಸಂಭ್ರಮ

Pinterest LinkedIn Tumblr

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಹೆಚ್ಚಿದೆ. ನವರಾತ್ರಿಯ ಕೊನೆಯ ಎರಡು ದಿನದ ಹಬ್ಬದ ವಾತಾವರಣ ಕಳೆಗಟ್ಟಿದೆ.

ಇಂದು ಆಯುಧಪೂಜೆ ಮತ್ತು ನಾಳೆ ವಿಜಯದಶಮಿ ಅಂಗವಾಗಿ ಜನರು ಹಬ್ಬದ ಸಡಗರದಲ್ಲಿ ತೊಡಗಿದ್ದಾರೆ. ರಾಜ್ಯಾದ್ಯಂತ ಮಾರುಕಟ್ಟೆಗಳಲ್ಲಿ ನಿನ್ನೆಯಿಂದ ಆಯುಧಪೂಜೆ ಹಬ್ಬದ ಖರೀದಿ ಜೋರಾಗಿದೆ. ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂದಿದೆ.

ಹಬ್ಬದ ಹಿನ್ನೆಲೆಯಲ್ಲಿ ಹೂವು-ಹಣ್ಣು-ತರಕಾರಿಗಳ ಬೆಲೆ ಏರಿಕೆಯಾಗಿದೆ. ಈ ಬಾರಿ ಹಬ್ಬದ ಸಂದರ್ಭದಲ್ಲಿ ಅಲ್ಪ ಮಟ್ಟಿಗೆ ಕೊರೊನಾ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವ್ಯಾಪಾರ – ವಹಿವಾಟು, ಜನಜೀವನ ದೈನಂದಿನ ಚಟುವಟಿಕೆ ಸಹಜ ಸ್ಥಿತಿಗೆ ಬಂದಿದ್ದು, ವ್ಯಾಪಾರದಲ್ಲಿ ಚೇತರಿಕೆ ಕಂಡು ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಇಂದು ಆಯುಧಪೂಜೆ ಹಾಗೂ ನಾಳೆ ವಿಜಯದಶಮಿ ಹಿನ್ನೆಲೆಯಲ್ಲಿ ಬುಧವಾರದಿಂದ ಹಬ್ಬದ ಸಡಗರ, ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಸಾವಿರಾರು ಜನ ಮಾರುಕಟ್ಟೆಯಲ್ಲಿ ಹಬ್ಬದ ಸಾಮಗ್ರಿ, ಸಿಹಿ ತಿಂಡಿಗಳು ಖರೀದಿಯಲ್ಲಿ ತೊಡಗಿದ್ದು ಕಂಡುಬಂದಿದೆ.

ಮೈಸೂರಿನಲ್ಲಿ ಆಯುಧಪೂಜೆ ಸಂಭ್ರಮ..
ನಾಡಹಬ್ಬ ದಸರಾ ಅಂಗವಾಗಿ ಮೈಸೂರು ಅರಮನೆಯ ಮುಂಭಾಗದಲ್ಲಿ ದಸರಾ, ಆಯುಧ ಪೂಜೆ ನಡೆಯಲಿದೆ. ಅರಮನೆಯಲ್ಲಿ ಆಯುಧಗಳಿಗೆ ಯುದುವೀರ್ ಒಡೆಯರ್ ಇಂದು ಬೆಳಗ್ಗೆ ಪೂಜೆ ಸಲ್ಲಿಸಿದ್ದಾರೆ. ಪೂರ್ವಿಕರು ಬಳಸುತ್ತಿದ್ದ ಕತ್ತಿ, ಗುರಾಣಿ, ಗುದ್ದಲಿ, ಆಯುಧಗಳಿಗೆ ಪೂಜೆ ಸಲ್ಲಿಸಲಿದ್ದು, ಮುಜಾನೆ 5.30ಕ್ಕೆ ಪೂಜಾ ವಿಧಿ ವಿಧಾನಗಳು ಆರಂಭವಾಗಿದೆ. ಇಂದು ಬೆಳಗ್ಗೆ ರಾಜಪರಿವಾರದ ಆನೆ, ಪಲ್ಲಕ್ಕಿ, ಕುದುರೆ, ವಾಹನಗಳಿಗೆ ಯುದುವೀರ್ ಒಡೆಯರ್ ಸೋಮನಾಥ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದಾರೆ.

Comments are closed.