ಕರ್ನಾಟಕ

ಅಧಿಕಾರಿಗಳ ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆಗೆ ರಾಜ್ಯ ಸರ್ಕಾರದಿಂದ ಬ್ರೇಕ್: ನಿಯಮ ಮೀರಿದರೆ ಶಿಸ್ತು ಕ್ರಮ..!

Pinterest LinkedIn Tumblr

ಬೆಂಗಳೂರು: ಸರಕಾರಿ ಅಧಿಕಾರಿಗಳ ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಖಡಕ್‌ ಸುತ್ತೋಲೆ ಹೊರಡಿಸಿದೆ.

ರಾಜ್ಯದ ಅಧಿಕಾರಿಯು ನಂಬಿಕಾರ್ಹ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವುದನ್ನು ಹೊರತುಪಡಿಸಿ, ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುವುದಕ್ಕೆ ಕಡಿವಾಣ ಹಾಕಿದ್ದು, ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಹತ್ವದ ಸುತ್ತೋಲೆ ಹೊರಡಿಸಿ ಆದೇಶ ಹೊರಡಿಸಿದ್ದಾರೆ.

ಸುತ್ತೋಲೆಯಲ್ಲಿ ಏನಿದೆ….
ಸರ್ಕಾರಿ ಅಧಿಕಾರಿಗಳು ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇಂತಹ ಪ್ರಸಂಗಗಳು ಸರ್ಕಾರದ ಆಡಳಿತ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತವೆ ಹಾಗೂ ಸರ್ಕಾರಕ್ಕೆ ಮುಜುಗರವನ್ನು ಉಂಟು ಮಾಡುವಂತದ್ದಾಗಿರುವುದರಿಂದ ಅಧಿಕಾರಿಗಳು ಇಂತಹ ನಡೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ಅಧಿಕಾರಿಯು ನಂಬಿಕಾರ್ಹ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವುದನ್ನು ಹೊರತುಪಡಿಸಿ, ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಕರ್ನಾಟಕ ಸರ್ಕಾರದ ಅಥವಾ ಯಾವುದೇ ಇತರ ರಾಜ್ಯ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಕಾರ್ಯನೀತಿ ಅಥವಾ ಕ್ರಮವನ್ನು ಟೀಕಿಸುವುದು, ಯಾರೇ ಸರ್ಕಾರಿ ನೌಕರನು ಆಕಾಶವಾಣಿ ಪ್ರಸಾರದಲ್ಲಾಗಲಿ ಅಥವಾ ದೂರದರ್ಶನದ ಕಾರ್ಯಕ್ರಮದಲಾಗಲೀ ಅಥವಾ ಯಾವುದೇ ಸಾರ್ವಜನಿಕ ಮಾಧ್ಯಮದಲ್ಲಿ ವಾಸ್ತವ ಹೇಳಿಕ ಅಥವಾ ಅಭಿಪ್ರಾಯ ನೀಡುವುದಾಗಲೀ ಅವನ ಹೆಸರಿನಲ್ಲಿ ಅಥವಾ ಅನಾಮಧೇಯವಾಗಿ ಗುಪ್ತನಾಮದಲ್ಲಿ ಅಥವಾ ಬೇರೊಬ್ಬನ ಹೆಸರಿನಲ್ಲಿ ಪ್ರಕಟಿಸಲಾದ ಇತರ ಯಾವುದೇ ದಸ್ತಾವೇಜಿನಲ್ಲಿ ಅಥವಾ ಪತ್ರಿಕೆಗೆ ಬರೆದ ಯಾವುದೇ ಪತ್ರದಲ್ಲಿ ಅಥವಾ ಯಾವುದೇ ಸಾರ್ವಜನಿಕ ಹೇಳಿಕೆಯಲ್ಲಿ ಮಾಡುವಂತಿಲ್ಲ.

ಕರ್ನಾಟಕ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಅಥವಾ ಯಾವುದೇ ಇತರ ರಾಜ್ಯ ಸರ್ಕಾರದ ಪ್ರಸ್ತುತ ಅಥವಾ ಇತ್ತೀಚಿನ ಯಾವುದೇ ನೀತಿಯ ಅಥವಾ ಕ್ರಮದ ಬಗ್ಗೆ ಪ್ರತಿಕೂಲ ಟೀಕೆಯ ಪರಿಣಾಮ ಹೊಂದಿರುವಂತಹ ಯಾವುದೇ ಸಂಗತಿಗಳ ನಿರೂಪಣೆಯನ್ನು ಮಾಡತಕ್ಕದ್ದಲ್ಲ ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸತಕ್ಕದಲ್ಲ.

ಸರ್ಕಾರಿ ನೌಕರರ ಕೃತ್ಯಗಳ ಮತ್ತು ನಡತೆಯ ಸಮರ್ಥನೆಗಾಗಿ ನೇಮಿಸಲಾದ ಪ್ರಾಧಿಕಾರದ ಪೂರ್ವಾನುಮೋದನೆ ಪಡೆಯದ ಹೊರತು ಯಾರೇ ಸರ್ಕಾರಿ ನೌಕರನು ಸರ್ಕಾರದ ಯಾವ ಅಧಿಕೃತ ಕೃತ್ಯವು ಪ್ರತಿಕೂಲ ಟೀಕೆಯ ಅಥವಾ ಮಾನಹಾನಿ ಸ್ವರೂಪದ ನಿಂದನೆಯ ವಸ್ತು ವಿಷಯವಾಗಿರುವುದೋ ಆ ಯಾವುದೇ ಅಧಿಕೃತ ಕೃತ್ಯದ ಸಮರ್ಥನೆಗಾಗಿ ಯಾವುದೇ ನ್ಯಾಯಾಲಯಕ್ಕೆ ಅಥವಾ ಪತ್ರಿಕೆಗೆ ಮೊರ ಹೋಗತಕ್ಕದ್ದಲ್ಲ.

ಸಾಮಾಜಿಕ ಮಾಧ್ಯಮಗಳನ್ನು ವೇದಿಕೆಗಳನ್ನಾಗಿರಿಸಿಕೊಂಡು ಇಲಾಖೆಯ/ಸರ್ಕಾರದ ಸಾಧನೆಗಳನ್ನು ಅಧಿಕಾರಿಗಳ ವೈಯಕ್ತಿಕ ಸಾಧನಗಳು ಎಂಬಂತೆ ಪುದರ್ಶಿಸಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯ ಸಾಧನೆಗಳ ಬಗ್ಗೆ ಅಥವಾ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಬೇಕಾದ ಸಂದರ್ಭದಲ್ಲಿ, ಅಧಿಕಾರಿಗಳು ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸದೇ ಸರ್ಕಾರದ ಆಡಳಿತ ಹೆಸರಿನಲ್ಲಿ ತೆರೆಯಲಾದ ಖಾತೆಗಳನ್ನು ಮಾತ್ರ ಬಳಸಿಕೊಳ್ಳಬೇಕು ಎಂದು ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ನಿಯಮ ಮೀರಿದವರ ವಿರುದ್ಧ ಕ್ರಮ
ಮೇಲಿನ ನಿಯಮಗಳಲ್ಲಿನ ಅವಕಾಶಗಳಿಗೆ ವ್ಯತಿರಿಕ್ತವಾಗಿ ಯಾವುದೇ ಅಧಿಕಾರಿ ಸರ್ಕಾರದ ಕಾರ್ಯನೀತಿಗೆ ವ್ಯತಿರಿಕ್ತವಾಗಿ ಅನಪೇಕ್ಷಿತ ವೇದಿಕೆಗಳಲ್ಲಿ ತಮ್ಮದೇ ಆದ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಕೃತ್ಯಗಳಲ್ಲಿ ತೊಡಗುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಈ ಮೂಲಕ ಎಲ್ಲಾ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

ಸರ್ಕಾರಿ ಯೋಜನೆಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿಯನ್ನು ಪ್ರಸಾರ ಮಾಡುವುದು ಸೇರಿದಂತೆ ಇತರ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವಿದ್ದಲ್ಲಿ ಮಾತ್ರ ಅಧಿಕಾರಿಗಳು ಮಾಧ್ಯಮಗಳನ್ನು ಬಳಸಬಹುದಾಗಿದೆ. ಕುಂದು ಕೊರತೆಗಳನ್ನು ವ್ಯಕ್ತಪಡಿಸಲು ಮಾಧ್ಯಮಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.

Comments are closed.