ಕರ್ನಾಟಕ

ತಾಂತ್ರಿಕ ದೋಷದಿಂದ ಪಾರ್ಕಿಂಗ್ ಜಾಗಕ್ಕೆ ಮರಳಿದ ವಿಮಾನ; ಪ್ರಯಾಣಿಕರ ಪರ ನಿಂತ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Pinterest LinkedIn Tumblr

ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ಟೇಕಾಫ್‌ಗೂ ಮುನ್ನವೇ ತಾಂತ್ರಿಕ ದೋಷ ಕಂಡುಬಂದಿದ್ದು, ಅದೃಷ್ಟವಶಾತ್‌ ಭಾರೀ ದುರಂತವೊಂದು ತಪ್ಪಿರುವ ಘಟನೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಶೋಭಾ ಕರಂದ್ಲಾಜೆ ಅವರು ಹೈದ್ರಾಬಾದ್‌ಗೆ ಪ್ರಯಾಣ ಬೆಳೆಸಬೇಕಾಗಿತ್ತು. ಆದರೆ ವಿಮಾನದಲ್ಲಿ ತಾಂತ್ರಿಕ ದೋಷ ಇರುವುದನ್ನು ವಿಮಾನದ ಸಿಬ್ಬಂದಿಗಳು ಪತ್ತೆ ಹಚ್ಚಿದ್ದು ವಿಮಾನ ಪ್ರಯಾಣವನ್ನು ರದ್ದುಗೊಳಿಸಿ ರನ್ ವೇಯಿಂದ ಪಾರ್ಕಿಂಗ್ ಜಾಗದಲ್ಲಿ ವಿಮಾನ ನಿಲ್ಲಿಸಲಾಯಿತು.

ವಿಮಾನದಲ್ಲಿ ಕುಳಿತಿದ್ದ ಶೋಭಾ ಕರಂದ್ಲಾಜೆ ಬಳಿ ಅಧಿಕಾರಿಗಳು, ನಿಮಗೆ ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಲಾಗುವುದು. ಸದ್ಯ ವಿಮಾನದಿಂದ ಕೆಳಗೆ ಇಳಿದು, ಗಣ್ಯರ (ವಿಐಪಿ) ಕೊಠಡಿಯಲ್ಲಿ ವಿಶ್ರಾಂತಿ ಪಡೆಯಲು ವಿನಂತಿಸಿದ್ದರು.

ಆದರೆ ವಿಮಾನದಿಂದ ಇಳಿಯಲು ಒಪ್ಪದ ಶೋಭಾ ಕರಂದ್ಲಾಜೆ, ವಿಮಾನದಲ್ಲಿ ಪ್ರಯಾಣಿಸುವ ಎಲ್ಲರೂ ಸಮಾನರು. ಯಾವುದೇ ತಾರತಮ್ಯ‌ ಮಾಡಬೇಡಿ. ಎಲ್ಲರನ್ನೂ ಸುರಕ್ಷಿತವಾಗಿ ಕಳುಹಿಸಲು ಪ್ರತ್ಯೇಕ ವಿಮಾನದ ವ್ಯವಸ್ಥೆ ‌ಮಾಡಿ. ಎಲ್ಲರೂ ಹೊರಟ ನಂತರವೇ ನಾನು ಕೊನೆಯದಾಗಿ ವಿಮಾನದಿಂದ ಇಳಿಯುವೆ ಎಂದು ವಿಮಾನದಲ್ಲೇ ಕುಳಿತರು.

ಕೆಲ ಹೊತ್ತಿನ ನಂತರ, ಪ್ರತ್ಯೇಕ ವಿಮಾನದ ಮೂಲಕ ಎಲ್ಲಾ ಪ್ರಯಾಣಿಕರನ್ನು ಹೈದಾರಾಬಾದ್‌ಗೆ ಕಳುಹಿಸಲಾಯಿತು ಎಂದು ತಿಳಿದುಬಂದಿದೆ.

Comments are closed.