ಕರ್ನಾಟಕ

ಜನಪರ ಚಳುವಳಿಯಲ್ಲಿ ಭಾಗವಹಿಸಿದವರನ್ನೆಲ್ಲಾ ‘ರೌಡಿಶೀಟರ್’ ಮಾಡುವುದು ಸರಿಯಲ್ಲ: ಗೃಹಸಚಿವ ಆರಗ ಜ್ಞಾನೇಂದ್ರ

Pinterest LinkedIn Tumblr

ಬೆಂಗಳೂರು: ಪ್ರತಿ ಪೊಲೀಸ್‌ ಠಾಣೆಯಲ್ಲಿರುವ ‘ರೌಡಿ ಶೀಟರ್‌’ ಪಟ್ಟಿಯನ್ನು ಕಾನೂನಿನ ಮಾನದಂಡ ಪ್ರಕಾರ ಪುನಃ ಪರಿಶೀಲಿಸಬೇಕು. ಕನ್ನಡಪರ, ರೈತಪರ ಹಾಗೂ ಇನ್ನಿತರ ಜನಪರ ಚಳವಳಿಯಲ್ಲಿ ಭಾಗವಹಿಸಿದವರ ವಿರುದ್ಧ ದಾಖಲಾದ ರೌಡಿ ಶೀಟರ್‌ ಪಟ್ಟಿಯನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿ ಅಮಾಯಕರ ಹೆಸರು ಪಟ್ಟಿಯಲ್ಲಿದ್ದರೆ ಎಸ್ಪಿ ಅದನ್ನು ಪರಾಮರ್ಷಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಕ್ರಮ ವಲಸಿಗರು ದೇಶದ್ರೋಹಿ ಕೃತ್ಯ ಅಥವಾ ಸಮಾಜ ವಿರೋಧಿ ಕೃತ್ಯ ನಡೆಸದಂತೆ ನಿಗಾ ವಹಿಸಬೇಕು. ಅಂತವರ ಬಗ್ಗೆ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ದಾಖಲಾತಿ ನಿರ್ವಹಿಸಬೇಕು. ವೀಸಾ ಅವಧಿ ಮುಗಿದರೂ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ನಾಗರಿಕರನ್ನು ಗುರುತಿಸಿ ಅವರ ಚಟುವಟಿಕೆಗಳ ಮೇಲೆ ನಿಗಾ ಇರಿಸಬೇಕೆಂದು ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

ಬೆಂಗಳೂರು ಅಥವಾ ಮಂಗಳೂರಿನಲ್ಲಿ ಎನ್‌ಐಎ ಘಟಕ ಅಗತ್ಯದ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು. ಅಕ್ರಮ ಕ್ಯಾಸಿನೊ ಕ್ಲಬ್ ಮಟ್ಟ ಹಾಕಬೇಕು. ಒಂದೊಮ್ಮೆ ಅಕ್ರಮ ನಡೆದರೆ ಆಯಾ ಸರಹದ್ದಿನ ಠಾಣಾ ಪೊಲೀಸರು ಹೊಣೆಗಾರರಾಗುತ್ತಾರೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಪೊಲೀಸರ ಗಸ್ತು ಪದ್ಧತಿಯನ್ನು ಪರಿಷ್ಕರಿಸಿ ಅಪರಾಧ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ. ಪಟ್ಟಣ ಪ್ರದೇಶದಲ್ಲಿ ಇ -ಗಸ್ತು ವ್ಯವಸ್ಥೆಯನ್ನು ಬಲಪಡಿಸಲು ತೀರ್ಮಾನಿಸಲಾಗಿದೆ, ಎಂದರು.

Comments are closed.