ಕರ್ನಾಟಕ

ಬೆಂಗಳೂರಿನಲ್ಲಿ ಕೊರೋನಾ ಪರಿಸ್ಥಿತಿ ನಿರ್ವಹಣೆಗೆ ಮುಂಬೈ ಮಾದರಿಯನ್ನು ಅನುಸರಿಸಲು ನಿರ್ಧರಿಸಿದ ಸರ್ಕಾರ

Pinterest LinkedIn Tumblr

ಬೆಂಗಳೂರು: ಕೋವಿಡ್‌ ನಿಯಂತ್ರಿಸಲು ಮುಂಬೈ ಮತ್ತು ಚೆನ್ನೈನಲ್ಲಿ ಅನುಸರಿಸಿದ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ವಾರ್ಡ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಕೋವಿಡ್‌ ವಾರ್‌ ರೂಂ ಮತ್ತು ಕಾಲ್‌ ಸೆಂಟರ್‌ ನಿರ್ವಹಣೆಯ ಉಸ್ತುವಾರಿ ಹೊತ್ತಿರುವ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಹೀಗಿರುವಾಗ ಬೆಂಗಳೂರಿನಲ್ಲಿ ಕೊರೋನಾ ಪರಿಸ್ಥಿತಿ ನಿರ್ವಹಣೆಗೆ ಮುಂಬೈ ಮಾದರಿಯನ್ನು ಅನುಸರಿಸಲು ಸರ್ಕಾರ ನಿರ್ಧರಿಸಿದೆ. ಮಹಾನಗರದ ಎಲ್ಲಾ 198 ವಾರ್ಡ್‌ಗಳಲ್ಲಿ ವಿಕೇಂದ್ರೀಕೃತ ಚಿಕಿತ್ಸೆ ಮತ್ತು ತುರ್ತು ಪ್ರತಿಕ್ರಿಯೆ ಸಮಿತಿ ರಚಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಿದ್ದಾರೆ.

ಇಂತಹುದ್ದೊಂದು ಯೋಜನೆ ಜಾರಿಗೊಳಿಸಲು ಶನಿವಾರ ಸರ್ಕಾರ ನಿರ್ಧರಿಸಿದ್ದು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಅಲ್ಲದೇ ನಗರದ ಪ್ರತಿಯೊಬ್ಬ ವ್ಯಕ್ತಿಯ ಸುರಕ್ಷತೆಗಾಗಿ ಈ ಕ್ರಮ ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ಸಮಿತಿ ಜೊತೆ ಸಂಪರ್ಕ ಸಾಧಿಸಿ, ಸೂಕ್ತವಾದ ಆರೋಗ್ಯ ವ್ಯವಸ್ಥೆ ಪಡೆದುಕೊಳ್ಳಲು ಜನರಿಗೆ ಸಾಧ್ಯವಾಗುತ್ತದೆ ಎಂದಿದ್ದಾರೆ. ವಾರ್ಡ್‌ ಮಟ್ಟದ ಈ ಸಮಿತಿ ಬಹುತೇಕ ನಗರಗಳಲ್ಲಿ ಯಶಸ್ವಿಯಾಗಿದೆ.

ಸೂಕ್ತ ಸಮಯದಲ್ಲಿ ಸೂಕ್ತವಾದ ಚಿಕಿತ್ಸೆ ನಿಡಲು ಸಹಕಾರಿಯಾಗುತ್ತದೆ. ಸದ್ಯಕ್ಕೀಗ ಇರುವ ಕೆಂದ್ರೀಕೃತ ವ್ಯವಸ್ಥೆಯಿಂದ ಟೆಸ್ಟ್‌ ರಿಪೋರ್ಟ್‌ ನೀಡುವ ಪ್ರಕ್ರಿಯೆ, ಆಸ್ಪತ್ರೆಗೆ ದಾಖಲಾಗುವ ಪ್ರಕ್ರಿಯೆ ಹಾಗೂ ಬಿಯು ನಂಬರ್ ಒದಗಿಸುವ ಪ್ರಕ್ರಿಯೆ ಹೀಗೆ ಎಲ್ಲಾ ವಿಚಾರದಲ್ಲೂ ವಿಳಂಬವಾಗುತ್ತಿದೆ ಎಂದೂ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಪ್ರತಿ ವಾರ್ಡಿನಲ್ಲಿ ವೈದ್ಯರು, ದಾದಿಯರು, ಸ್ವಯಂ ಸೇವಕರು, ಸ್ಥಳೀಯ ನಿವಾಸಿಗಳ ಸಂಘಗಳ ಪದಾಧಿಕಾರಿಗಳಿರುವ ಕನಿಷ್ಠ 50 ಜನರ ಸಮಿತಿ ರಚನೆ. ಈ ಸಮಿತಿ ಸೋಂಕಿತರನ್ನು ಚಿಕಿತ್ಸೆಯ ಅಗತ್ಯವನ್ನು ಆದ್ಯತೆ ಆಧಾರದಲ್ಲಿ ನಿರ್ಧರಿಸುವ ಕೇಂದ್ರಕ್ಕೆ (ಟ್ರಯೇಜಿಂಗ್ ಸೆಂಟರ್‌) ಕರೆತಂದು, ರೋಗ ಲಕ್ಷಣಗಳಿಗೆ ಅನುಗುಣವಾಗಿ ವರ್ಗೀಕರಿಸುತ್ತದೆ.

ಆಸ್ಪತ್ರೆಯಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ವ್ಯವಸ್ಥೆಯೂ ಜಾರಿಗೊಳಿಸುವ ಸಾಧ್ಯತೆ ಇದೆ. ವಾರ್ಡ್‌ ಸಮಿತಿಗಳು ಸಾಧಾರಣ ರೋಗಲಕ್ಷಣ ಇರುವವರಿಗೆ ಮನೆಯಲ್ಲಿ ಕ್ವಾರಂಟೈನ್‌ ಆಗಲು ಸೂಚಿಸುತ್ತವೆ. ಈ ನಿಟ್ಟಿನಲ್ಲಿ ಔಷದ ಕಿಟ್ ಒದಗಿಸಲಿವೆ. ಆಸ್ಪತ್ರೆಗೆ ದಾಖಲಿಸಬೇಕಾದವರನ್ನು ರೋಗಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಗೆ ದಾಖಲಿಸಲಿವೆ.

Comments are closed.