ಕರ್ನಾಟಕ

ಚಾಮರಾಜನಗರ ಆಸ್ಪತ್ರೆಯಲ್ಲಿ ಆಮ್ಲಜನಕ ದುರಂತ; ತನಿಖೆಗೆ ರಾಜ್ಯ ಸರ್ಕಾರ ಆದೇಶ

Pinterest LinkedIn Tumblr

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಆಕ್ಸಿಜನ್ ದುರಂತದಿಂದ 23 ಮಂದಿ ಮೃತಪಟ್ಟ ಘಟನೆಯ ತನಿಖೆಗೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಕುರಿತಾಗಿ ಸಿಎಂ ಬಿಎಸ್‌ ಯಡಿಯೂರಪ್ಪ ಆದೇಶ ಹೊರಡಿಸಿದ್ದು ಮೂರು ದಿನಗಳ ಒಳಗಾಗಿ ತನಿಖಾ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

ಐಎಎಸ್‌ ಅಧಿಕಾರಿ ಶಿವಯೋಗಿ ಕಳಸದ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥಾಪಕ ನಿರ್ದೇಶಕರ) ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಘಟನೆಯ ಕುರಿತಾಗಿ ತನಿಖಾ ವರದಿಯನ್ನು ಮೂರು ದಿನಗಳ ಒಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶ ಮಾಡಲಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯ ಒಳಗಾಗಿ ಕೋವಿಡ್ ಸೋಂಕಿಗೆ ತುತ್ತಾದ 23 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ. ಈ ಘಟನೆಗೆ ಕಳವಳವನ್ನು ವ್ಯಕ್ತಪಡಿಸಿದ ಸರ್ಕಾರ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಿ ಸರ್ಕಾರ ವರದಿ ನೀಡುವಂತೆ ಸೂಚನೆ ನೀಡಿದೆ.

ಭಾನುವಾರ ರಾತ್ರಿ ನಡೆದ ಈ ಘಟನೆ ಇದೀಗ ರಾಷ್ಟ್ರಾದ್ಯಂತ ಸುದ್ದಿಗೆ ಗ್ರಾಸವಾಗುತ್ತಿದೆ. ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡಾ ಈ ಘಟನೆಯ ಕುರಿತಾಗಿ ಟ್ವೀಟ್ ಮಾಡಿದ್ದಾರೆ.

ಈ ನಡುವೆ ಸಿಎಂ ಬಿಎಸ್ ಯಡಿಯೂರಪ್ಪ ಆರೋಗ್ಯ ಸಚಿವ ಡಾ. ಸುಧಾಕರ್‌ ಅವರ ಜೊತೆಗೆ ಮಾತನಾಡಿ ಘಟನಾ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಚಾಮರಾಜನಗರ ಜಿಲ್ಲಾಧಿಕಾರಿಗೂ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

Comments are closed.