ಬೆಂಗಳೂರು: 2ನೇ ಅಲೆಯ ಭೀಕರತೆ ಅನುಭವಿಸುತ್ತಿರುವ ರಾಜ್ಯದಲ್ಲಿ ಈಗಲೇ 3ನೇ ಅಲೆಯ ಆತಂಕ ಕೂಡ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸಲುವ ಸಲುವಾಗಿ ರಾಜ್ಯ ಸರ್ಕಾರ ತಜ್ಞರ ಸಮಿತಿಯೊಂದರನ್ನು ರಚನೆ ಮಾಡಿದೆ.
ನಿನ್ನೆಯಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಗರದ ಎಂಎಸ್.ರಾಮಯ್ಯ, ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ಬಳಿಕ ಕೋವಿಡ್ ರೋಗಿಗಳಿಗೆ ಸೂಕ್ತ ಸೌಲಭ್ಯ, ಉತ್ತಮ ಚಿಕಿತ್ಸೆ ನೀಡುವ ಕುರಿತು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನೆ ಸಭೆಯಲ್ಲಿ ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ರಾಜ್ಯ ಈಗಾಗಲೇ 2ನೇ ಅಲೆಯಲ್ಲಿ ನಲುಗಿದ್ದು, ಈ ಹಂತದಲ್ಲಿಯೇ ಅಕ್ಟೋಬರ್ ವೇಳೆಗೆ 3ನೇ ಅಲೆ ಏಳುವ ಸಾಧ್ಯತೆ ಬಗ್ಗೆ ತಜ್ಞರು ಸರ್ಕಾರದ ಗಮನ ಸೆಳೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಶೀಘ್ರವೇ ತಜ್ಞರ ಸಮಿತಿ ರಚಿಸಲು ಸರ್ಕಾರ ನಿರ್ಧಾರ ಕೈಗೊಂಡಿತು. 3ನೇ ಅಲೆ ವೇಳೆಗೆ ವೈದ್ಯಕೀಯ ಸಿಬ್ಬಂದಿಯ ಕೊರತೆಯಾಗದಂತೆ ತಡೆಯಲು ವಿದೇಶದಲ್ಲಿ ವೈದ್ಯಕೀಯ ಪದವಿ ಮುಗಿಸಿರುವ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ ನಲ್ಲಿ ನೋಂದಣಿ ಮಾಡಿಸಿ ಅವರನ್ನು ಬಳಸಿಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಲು ಸಭೆಯಲ್ಲಿ ಚರ್ಚಿಸಲಾಯಿತು.
ವೈದ್ಯಕೀಯ ಮಾನವ ಸಂಪನ್ಮೂಲ ಕೊರತೆ ನೀಗಿಸಲು ಅಂತಿಮ ವರ್ಷದ ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಿ ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳುವುದು, ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೋವಿಡ್ ಲಸಿಕೆ ನೀಡಲು ಕ್ರಮಕೈಗೊಳ್ಳಬೇಕು. ಅಲ್ಲದೆ, ನರ್ಸಿಂಗ್, ಫಾರ್ಮಸಿ, ಪಿಜಿಯೋಧೆರಪಿ, ಆಯುಷ್ ವೈದ್ಯ, ದಂತ ವೈದ್ಯಕೀಯ ಕೋರ್ಸ್ ಗಳ ಮತ್ತು ಹಾಸ್ಪಿಟರ್ ಮ್ಯಾನೇಜ್ಮೆಂಟ್ ಕೋರ್ಸ್ ಗಳ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಬೇಕು. ಇದೇ ವೇಳೆ ಲಸಿಕೆಯ ವೇಗ ಮತ್ತಷ್ಟು ಹೆಚ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಅಲ್ಲದೆ, ಕೋವಿಡ್ ಚಿಕಿತ್ಸೆ ನೀಡುವಲ್ಲಿ ತೊಡಗಿರುವ ವೈದ್ಯರಿಗೆ ಪ್ರಸ್ತುತ ನೀಡುತ್ತಿರುವ ಪ್ರೋತ್ಸಾಹಧನ ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ. ವೈದ್ಯರು/ವೈದ್ಯಕೀಯ ಸಿಬ್ಬಂದಿಗಳು ಸೋಂಕಿತರಾದರೆ ಅವರಿಗೆ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.
ಸಭೆಯಲ್ಲಿ ಕೈಗೊಂಡ ತೀರ್ಮಾನಗಳಿವು…
ಆಮ್ಲಜನಕ ಸಾಂದ್ರಕಗಳನ್ನು ಬಳಸಿಕೊಂಡು ಹೋಟೆಲ್‌ಗಳನ್ನು ಆಮ್ಲಜನಕಯುಕ್ತ ಹಾಸಿಗೆಗಳೊಂದಿಗೆ ಆಸ್ಪತ್ರೆಗಳಾಗಿ ಪರಿವರ್ತಿಸುವುದು.
ಆಮ್ಲಜನಕ ವ್ಯವಸ್ಥೆ ಇರುವ ಹಾಸಿಗೆಗಳನ್ನು ಐಸಿಯು ಹಾಸಿಗಳನ್ನಾಗಿ ಪರಿವರ್ತಿಸುವುದು.
ವೈದ್ಯಕೀಯ ಕಾಲೇಜಿನ ವಸತಿ ನಿಲಯಗಳ ಸಾಮಾನ್ಯ ಬೆಡ್ ಗಳನ್ನು ಆಕ್ಸಿಜನೇಟೆಡ್ ಬೆಡ್ ಗಳಾಗಿ ಪರಿವರ್ತಿಸುವುದು.
ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಆಕ್ಸಿಜನ್ ಜನರೇಷನ್ ಪ್ಲಾಂಟ್ ಅಳವಡಿಸಲು ಸರ್ಕಾರದಿಂದ ಧನಸಹಾಯ, ಕಡಿಮೆ ಕಾರ್ಯಭಾರವಿರುವ ವೈದ್ಯಕೀಯ ಸಿಬ್ಬಂದಿಯನ್ನು ಗುರ್ತಿಸಿ ಅವರನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಳ್ಳಲು ಕ್ರಮ.
ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅಗತ್ಯವಿಲ್ಲದ ರೋಗ ಲಕ್ಷಣ ರಹಿತ ಸೋಂಕಿತರು ಕೂಡ ದಾಖಲಾಗುತ್ತಿದ್ದು, ಅಗತ್ಯವಿದ್ದವರನ್ನು ಮಾತ್ರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಉಳಿದ ಲಕ್ಷಣರಹಿತ ಸೋಂಕಿತರನ್ನು ಮನೆಯಲ್ಲಿಯೇ ಐಲೋಲೇಷನ್ ಮಾಡಿ ಚಿಕಿತ್ಸೆ ಮುಂದುವರೆಸಲು ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಟೆಲಿಮೆಡಿಸಿನ್ ಸೌಲಭ್ಯ ಬಲಪಡಿಸುವುದು.
ಅನಗತ್ಯ ಬಳಕೆ ತಡೆಗಟ್ಟಲು ಆಕ್ಸಿಜನ್ ಹಾಗೂ ರೆಮ್ಡೆಸಿವಿರ್ ಬಳಕೆ ಕುರಿತು ಪರಿಶೋಧನೆ ಮಾಡುವುದು.
Comments are closed.