ಕರ್ನಾಟಕ

ವಿಧಾನಸಭೆ ಅಧಿವೇಶನದಲ್ಲಿ ಅಂಗೀಕಾರಗೊಂಡ ಗೋ ಹತ್ಯೆ ನಿಷೇಧ ವಿಧೇಯಕದಲ್ಲಿರುವ ಪ್ರಮುಖ ಅಂಶಗಳೇನು ಗೊತ್ತಾ?

Pinterest LinkedIn Tumblr


ಬೆಂಗಳೂರು; ವಿರೋಧ ಪಕ್ಷಗಳ ಪ್ರತಿರೋಧದ ನಡುವೆಯೂ ಇಂದು ವಿಧಾನಸಭೆ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಮಂಡನೆಗೆ ಸ್ಪೀಕರ್ ಅವಕಾಶ ನೀಡಿದ್ದಾರೆ. ಏಕಾಏಕಿ ಈ ಮಸೂದೆ ಮಂಡನೆಗೆ ಮುಂದಾದ ಸರ್ಕಾರದ ನಡೆಗೆ ವಿರೋಧ ಪಕ್ಷಗಳು ತೀವ್ರ ಅಸಮಾಧಾನ ಹೊರಹಾಕಿದರು. ಗೋ ಹತ್ಯೆ ನಿಷೇಧ ಮಸೂದೆ ಬಗ್ಗೆ ವಿಪಕ್ಷ ಸದಸ್ಯರ ಚರ್ಚೆಯಿಲ್ಲದೆ ಬರೀ ಆಡಳಿತ ಪಕ್ಷದ ಸದಸ್ಯರು ಮಾತ್ರ ಚರ್ಚೆ ಮಾಡಿ ವಿಧೇಯಕ ಅಂಗೀಕಾರಗೊಂಡಿತು.

ಮಸೂದೆಯ ಪ್ರಮುಖಾಂಶಗಳು

ಹಸು, ಕರು, ಎಮ್ಮೆ, ಎತ್ತು ಹಾಗೂ 13 ವರ್ಷ ಕೆಳಗಿನ ಕೋಣ ಹತ್ಯೆ ನಿಷೇಧ
ತಪ್ಪಿತಸ್ಥರಿಗೆ 3 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ
ಪ್ರತಿ ಗೋ ಹತ್ಯೆಗೆ 50,000 ದಿಂದ ಗರಿಷ್ಠ ಐದು ಲಕ್ಷ ರೂ.ವರೆಗೆ ದಂಡ
ಪುನರಾವರ್ತಿತ ಅಪರಾಧಕ್ಕೆ 1 ಲಕ್ಷದಿಂದ 10 ಲಕ್ಷದವರೆಗೆ ದಂಡ ಹಾಗೂ ಏಳು ವರ್ಷ ಜೈಲು ಶಿಕ್ಷೆ
ಗೋ ಹತ್ಯೆ ಉದ್ದೇಶಕ್ಕಾಗಿ ಅಂತರಾಜ್ಯ ಹಾಗೂ ರಾಜ್ಯದೊಳಗಡೆ ಗೋ ಸಾಗಾಟ ನಿಷೇಧ
ಕೃಷಿ ಹಾಗೂ ಪಶುಸಂಗೋಪನೆ ಉದ್ದೇಶಕ್ಕಾಗಿ ಗೋ ಸಾಗಾಟಕ್ಕೆ ಅಧಿಕಾರಿಗಳ ಅನುಮತಿ ಅಗತ್ಯ
ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಸಾಗಾಟ ಮಾಡಬೇಕು
ನಿಯಮ ಉಲ್ಲಂಘನೆ ಮಾಡಿದರೆ ಮೂರು ವರ್ಷದಿಂದ ಐದು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಐವತ್ತು ರೂ. ಸಾವಿರ ದಂಡ
ಎಸ್ ಐ ಶ್ರೇಣಿ ಹಾಗೂ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳು ತಪಾಸಣೆ ಹಾಗೂ ಮುಟ್ಟುಗೋಲು ಮಾಡಲು ಕಾಯ್ದೆಯಲ್ಲಿ ಅಧಿಕಾರ
ಮುಟ್ಟುಗೋಲು ಹಾಕಿದ ಕೂಡಲೇ ಸಂಬಂಧಿತ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗೆ ವರದಿ ಮಾಡಬೇಕು
ಗೋ ಹತ್ಯೆಗೆ ಸಂಬಂಧಿಸಿದಂತೆ ಸಾಗಾಟ ಮಾಡಿದ ವಾಹನಗಳು ಹಾಗೂ ಇತರ ಸಲಕರಣೆಗಳನ್ನು ಆರೋಪಿಗೆ ಹಿಂದುರಿಗಿಸಲು ಬ್ಯಾಂಕ್ ಗ್ಯಾರಂಟಿ ನೀಡಬೇಕು
ಗೋಹತ್ಯೆ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ರಚನೆಗೆ ಅಧಿಕಾರ
ಸಂಶೋಧನಾ ಉದ್ದೇಶಕ್ಕಾಗಿ ಬಳಸುವ ಗೋವುಗಳಿಗೆ ವಿನಾಯಿತಿ
ಪಶು ವೈದ್ಯಾಧಿಕಾರಿ ದೃಢೀಕರಿಸಿದ ಗೋ ಹತ್ಯೆ ಮಾಡಲು ಅವಕಾಶ
ಯಾವುದೇ ರೋಗಗಳಿಂದ ಬಳಲುತ್ತಿರುವ ಗೋವುಳ ಹತ್ಯೆಗೆ ಅವಕಾಶ

ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಪಶುಸಂಗೋಪನಾ ಸಚಿವ ಪ್ರಭು ಚೌಹಣ್ ಅವರು ಇಂದು ವಿಧಾನಸಭಾ ಮಸೂದೆ ಮಂಡಿಸಲು ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ನೀಡಿದರು. ಏಕಾಏಕಿ ಮಸೂದೆ ಮಂಡನೆಗೆ ಅವಕಾಶ ನೀಡಿದ ಕ್ರಮಕ್ಕೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್​ ಹಾಗೂ ಜೆಡಿಎಸ್​ ಸದಸ್ಯರು ಸದನದ ಬಾವಿಗಿಳಿದು ಘೋಷಣೆ ಕೂಗಿದರು. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಗೋ ಹತ್ಯೆ ನಿಷೇಧ ಕಾನೂನು ತರಬಾರದು ಎಂದು ಹೇಳಿದ್ದೇವು. ಇದಕ್ಕೆ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿತ್ತು. ಆದರೆ ಈಗ ಹೇಳದೇ, ಕೇಳದೇ ಮಸೂದೆ ಮಂಡನೆಗೆ ಮುಂದಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

Comments are closed.