
ಅರಬ್ಬೀ ಸಮುದ್ರದ ಕಡಲ ತೀರ ಏಕಾಏಕಿ ರೇಡಿಯಂ ರೀತಿ ಹೊಳೆಯಲಾರಂಭಿಸಿದೆ. ರಾತ್ರಿ ಹೊತ್ತು ಬೀಸುವ ತಂಗಾಳಿಯ ನಡುವೆ ಕಡಲ ತಡಿಯಲ್ಲಿ ಸಮುದ್ರದ ಅಲೆಗಳು ಸಂಪೂರ್ಣ ನೀಲ ಬಣ್ಣದಿಂದ ಹೊಳೆಯುವುದನ್ನು ನೋಡಿ ಜನರು ಸಂಭ್ರಮಿಸುತ್ತಿದ್ದಾರೆ. ಆದರೆ, ಈ ಹೊಸ ವಿಚಿತ್ರ ವಿದ್ಯಮಾನ ಶುಭ ಸೂಚಕ ಅಲ್ಲ ಎನ್ನುತ್ತಿದ್ದಾರೆ ತಜ್ಞರು. ಮುಂದೆ ಕರಾವಳಿಯಲ್ಲಿ ಎದುರಾಗಲಿರುವ ಗಂಡಾಂತರದ ಸೂಚಕ ಎಂದು ಎಚ್ಚರಿಕೆ ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ಕರ್ನಾಟಕ ಗೋವಾ ಕರಾವಳಿಯುದ್ದಕ್ಕೂ ರಾತ್ರಿ ಅಲ್ಲಲ್ಲಿ ಸಮುದ್ರದ ನೀರು ನೀಲಿ ಬಣ್ಣದಿಂದ ಹೊಳೆಯುತ್ತಿರುವಂತೆ ಕಂಡು ಬಂದಿದೆ. ಸಮುದ್ರದಲ್ಲಿ ನಡೆಯುತ್ತಿರುವ ಈ ವಿಚಿತ್ರ ವಿದ್ಯಮಾನ ಹಲವರ ಕುತೂಹಲಕ್ಕೆ ಕಾರಣ ವಾಗಿದೆ.
ರಾತ್ರಿ ವೇಳೆ, ಸಮುದ್ರ ಕಡು ನೀಲಿ ಬಣ್ಣದ ಬೆಳಕಿನಿಂದ ಕೋರೈಸುತ್ತಿರುವುದು ಜನರನ್ನು ಆಕರ್ಷಿಸುತ್ತಿದೆ. ಕಡಲಲ್ಲಿ ನಡೆಯುತ್ತಿರುವ ಈ ವಿಚಿತ್ರ ವಿದ್ಯಮಾನ ಶುಭ ಸೂಚಕವಲ್ಲ ಎನ್ನುತಿದ್ದಾರೆ ಮೀನುಗಾರಿಕಾ ಮಹಾವಿದ್ಯಾಲಯದ ತಜ್ಞರು. ಸಮುದ್ರ ನೀಲಿ ವರ್ಣದಿಂದ ಹೊಳೆಯುತ್ತಿದೆ ಎಂದು ಸುದ್ದಿಯಾಗುತ್ತಿದ್ದಂತೆ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ತಜ್ಞರು ಹಲವು ಬೀಚ್ ಗಳಿಗೆ ತೆರಳಿ ನೀರಿನ ಸ್ಯಾಂಪಲ್ ಸಂಗ್ರಹಿಸಿ ಅಧ್ಯಯನ ನಡೆಸಿದ್ದಾರೆ. ಪ್ರಾಥಮಿಕ ವರದಿ ನೀಡಿದ್ದಾರೆ.
ಸಮುದ್ರ ಮಾಲಿನ್ಯ , ಕಡಲ ಒಡಲ ತಾಪಮಾನ ದಲ್ಲಾಗುತ್ತಿರುವ ಏರಿಕೆ ಸಮುದ್ರ ನೀಲಿಯಾಗಲು ಕಾರಣ ಎಂದು ಹೇಳಲಾಗಿದೆ. ಮಹಾವಿದ್ಯಾಲಯದ ತಜ್ಞರ ತಂಡ ನಡೆಸಿದ ಅಧ್ಯಯನದ ಪ್ರಕಾರ ಸಮುದ್ರ ಮಾಲಿನ್ಯ , ಕಡಲ ನೀರಿನ ತಾಪಮಾನ ದಲ್ಲಾಗಿರುವ ಏರಿಕೆ, ಸಾಗರ ಸೇರುವ ಕೊಳಚೆ ನೀರು, ಹೆಚ್ಚುವ ಸಮುದ್ರದ ಅಬ್ಬರ ಇವೆಲ್ಲವೂ ಸೇರಿ ಸಮುದ್ರದಲ್ಲಿ ರಾತ್ರಿ ನೀಲಿ ಬಣ್ಣದಲ್ಲಿ ನೀರು ಹೊಳೆಯಲು ಕಾರಣ . ವರ್ಷದಿಂದ ವರ್ಷಕ್ಕೆ ಏರುತ್ತಿರುವ ಜಾಗತಿಕ ತಾಪಮಾನವು ಸಮುದ್ರದ ನೀಲಿ ವರ್ಣ ಹೊರಸೂಸುವ ಪಾಚಿ ಮಾದರಿಯ ಜೀವಿಗಳು ಹೆಚ್ಚಾಗಿರುವುದು ಕಾರಣ ಎಂದು ಹೇಳಲಾಗಿದೆ.
ತಜ್ಞರ ತಂಡ ಮೈಕ್ರೋಸ್ಕೋಪಿಕ್ ವಿಧಾನ ಅನುಸರಿಸಿ ಪ್ಲಾಂಕ್ಟನ್ ಅನಾಲಿಸಿಸ್ ನಡೆಸಿದಾಗ ಇದರಲ್ಲಿರುವ ಸೂಕ್ಷ್ಮಾಣು ಜೀವಿ ನೋಕ್ಟಿಲೂಕಾ ಸಿಂಟಿಲನ್ಸ್ ಎನ್ನುವುದು ಗೊತ್ತಾಗಿದೆ. ಇದೇ ಜೀವಿ ಕರಾವಳಿಯಲ್ಲಿ ಕಡಲ ನೀರು ರಾತ್ರಿ ಹೊತ್ತು ನೀಲಿ ವರ್ಣದಲ್ಲಿ ಹೊಳೆಯಲು ಕಾರಣ ಎಂದು ಹೇಳಲಾಗಿದೆ. ಈ ಸೂಕ್ಷ್ಮಾಣು ಜೀವಿಗಳು ಅಥವಾ ಪಾಚಿ ಮಾದರಿಯ ಪ್ಲಾಂಕ್ಟನ್ ಜೀವಿಗಳಲ್ಲಿ ಉಂಟಾಗುವ ಜೈವಿಕ ರಾಸಾಯನಿಕ ಕ್ರಿಯೆಯಿಂದಾಗಿ ಈ ರೀತಿಯ ನೀಲಿ ಬೆಳಕು ಕಾಣಿಸುತ್ತದೆ .
ಈ ಸೂಕ್ಷ್ಮಾಣು ಜೀವಿ ಇತರ ಸೂಕ್ಷ್ಮಾಣುಜೀವಿಗಳನ್ನು ಭಕ್ಷಿಸುತ್ತದೆ ಇವುಗಳು ದೊಡ್ಡ ಪ್ರಮಾಣದಲ್ಲಿ ಸೇರುವಾಗ ದೇಹದಲ್ಲಿ ಜೈವಿಕರಾಸಾಯನಿಕ ವಸ್ತುಗಳಾದ ಲ್ಯುಸಿಫೆರಿನ್ ಮತ್ತು ಲೂಸಿಫೆರೇನ್ ಪ್ರಕ್ರಿಯೆ ನಡೆದು ಬೆಳಕು ಹೊರಸೂಸುತ್ತದೆ.
ಮೀನುಗಾರಿಕಾ ಕಾಲೇಜಿನ ತಜ್ಞರು ರಾತ್ರಿ ಮಾದರಿ ಸಂಗ್ರಹಕ್ಕಾಗಿ ತೆರಳುವಾಗ ಸಮುದ್ರ ನೀರಿನ ತಾಪಮಾನ ಹೊರಗಿನ ವಾತಾವರಣದ ತಾಪಮಾನ ಕ್ಕಿಂತ ಹೆಚ್ಚಿರುವುದು ಗಮನಿಸಿದ್ದಾರೆ ಹೊರಗೆ 30 ಡಿಗ್ರಿ ಸೆಲ್ಸಿಯಸ್ ಇದ್ದಾಗ ಸಮುದ್ರ ನೀರಿನ ತಾಪಮಾನ 32 ಡಿಗ್ರಿ ಇತ್ತು . ಸಾಮಾನ್ಯವಾಗಿ ನೀರು ತಂಪಾಗಿರಬೇಕು. 25 ಡಿಗ್ರಿ ಸೆಲ್ಸಿಯಸ್ ಮೀರಬಾರದು ಆದರೆ ಕಡಲ ಒಡಲು ಬಿಸಿಯಾಗುತ್ತಿರುವುದು ಶುಭಸೂಚಕವಲ್ಲ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ : Karnataka Assembly Session: ವಿಧಾನಸಭಾ ಅಧಿವೇಶನ; ಕಂದಾಯ ಸಚಿವ ಆರ್. ಅಶೋಕ್ ವಿರುದ್ಧ ಬಿಜೆಪಿ ಶಾಸಕರಿಂದಲೇ ಅಸಮಾಧಾನಸಮುದ್ರದ ವಾತಾವರಣದಲ್ಲಾಗುತ್ತಿರುವ ಬದಲಾವಣೆಗಳು ಎಲ್ಲ ವಿದ್ಯಮಾನಗಳಿಗೆ ಕಾರಣ ಎಂದು ಹೇಳಲಾಗುತ್ತದೆ ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಕರಾವಳಿ ಹಲವು ವಿದ್ಯಮಾನಗಳು ಗಳಿಗೆ ಸಾಕ್ಷಿಯಾಗುತ್ತಿದೆ . ಇತ್ತೀಚೆಗೆ ಪಶ್ಚಿಮ ಕರಾವಳಿಯಲ್ಲಿ ಕಾರ್ಗಿಲ್ ಫಿಶ್ ಹಾಗೂ ಜೆಲ್ಲಿಫಿಶ್ ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರಲು ಸಮುದ್ರದ ವಾತಾವರಣದಲ್ಲಿ ಉಂಟಾಗುತ್ತಿರುವ ಬದಲಾವಣೆಗಳೇ ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ನೀಲಿ ವರ್ಣ ಹೊರಸೂಸುವ ಸೂಕ್ಷ್ಮಾಣು ಜೀವಿ ಕಡಲಲ್ಲಿ ಹೆಚ್ಚಾದರೆ ನೀರಿನಲ್ಲಿ ಆಮ್ಲಜನಕದ ಕೊರತೆ ಯಾಗಲಿದೆ. ಈ ಹಿನ್ನೆಲೆಯಲ್ಲಿ ಇದು ಮೀನಿನ ಸಂತತಿಯ ನಾಶಕ್ಕೂ ಕಾರಣ ವಾಗಬಹುದು. ಕಡಲಿನ ತಾಪಮಾನ ದಲ್ಲಾಗುತ್ತುರುವ ಏರಿಕೆ ಮೀನುಗಳ ಮಹಾ ವಲಸೆಗೂ ಕಾರಣವಾಗುವ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಡಲಲ್ಲಿ ನಡೆಯುತ್ತಿರುವ ಈ ವಿಚಿತ್ರ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
Comments are closed.