ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್ ನಟನೆಯ ಬ್ಲಾಕ್ ಬಸ್ಟರ್ ಟಗರು ಸಿನಿಮಾ ಮತ್ತೆ ರಿಲೀಸ್ ಆಗಿದ್ದು ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಟಗರು ಪ್ರದರ್ಶನ ಕಾಣುತ್ತಿದೆ.
ನಟ ದುನಿಯಾ ವಿಜಯ್ ಟಗರು ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಲು ನಿರ್ಧರಿಸಿದ್ದು ಈ ಕುರಿತು ಫೇಸ್‌ಬುಕ್‌ನಲ್ಲಿ ದುನಿಯಾ ವಿಜಯ್ ಮಾಹಿತಿ ನೀಡಿದ್ದಾರೆ.
“ಕಳೆದ ಆರೇಳು ತಿಂಗಳಿನಿಂದ ಕೊರೊನಾ, ಐಸೋಲೇಶನ್, ಕ್ವಾರಂಟೈನ್, ಸೀಲ್‌ಡೌನ್ ಇದೇ ರೀತಿಯ ಪದಗಳನ್ನು ಕೇಳುತ್ತಿದ್ದ ನಮಗೆ ಈಗ ಮಾರ್ನಿಂಗ್ ಶೋ, ಮ್ಯಾಟ್ನಿ, ಲೇಟ್ ನೈಟ್ ಶೋ ಎಂಬ ಪದಗಳನ್ನು ಕೇಳುವ ಸಮಯ ಬಂದಿದೆ. ಕೊರೊನಾಗೆ ವ್ಯಾಕ್ಸಿನ್ ಇನ್ನೂ ಬಂದಿಲ್ಲ, ಆದರೆ ಜೀವನವೂ ನಡೆಯಬೇಕಿರುವುದರಿಂದ ಎಲ್ಲಉದ್ಯಮಗಳಂತೆ, ಕಳೆದೊಂದು ವಾರದಿಂದ ಸರ್ಕಾರದ ನಿಯಮಗಳನ್ನು ಪಾಲಿಸುತ್ತಲೇ ನಮ್ಮ ಕನಸಿನ ಮನೆಗಳಾದ ಚಿತ್ರಮಂದಿರಗಳು ಪ್ರದರ್ಶನ ಆರಂಭಿಸಿವೆ. ಭಯ ಆತಂಕ ಎಲ್ಲದರ ನಡುವೆಯೂ ಒಂದಷ್ಟು ಸಿನಿಮಾ ಪ್ರೇಮಿಗಳು ಥೀಯೇಟರ್‌ಗೆ ಬಂದು ಸಿನಿಮಾ ನೋಡಿದ್ದಾರೆ. ಅವರೆಲ್ಲರಿಗೂ ನನ್ನ ಮನಃಪೂರ್ವಕ ವಂದನೆಗಳು. ನನ್ನ ‘ಸಲಗ’ ಸಿನಿಮಾದ ನಿರ್ಮಾಪಕರಾದ ಕೆ ಪಿ ಶ್ರೀಕಾಂತ್ ನಿರ್ಮಾಣದ ಗೆಳೆಯ ಸೂರಿ ನಿರ್ದೇಶನದ ಚಿತ್ರರಂಗದ ನಾಯಕ, ನನ್ನ ಪಾಲಿಗೆ ಅಣ್ಣನ ಸಮಾನರಾದ ಶಿವರಾಜ್‌ಕುಮಾರ್ ಗೆಳೆಯ ಡಾಲಿ ಧನಂಜಯ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ಟಗರು’ ಇಂದಿನಿಂದ ಮರು ಬಿಡುಗಡೆಯಾಗುತ್ತಿದೆ. ಚಿತ್ರ ಮತ್ತೊಮ್ಮೆ ಗಲ್ಲಾಪೆಟ್ಟಿಗೆಯನ್ನು ದೋಚಲಿ ಎಂದು ಹಾರೈಸುತ್ತಾ ಭಾನುವಾರ ಅಂದರೆ ಅ. 25ರ ಮಧ್ಯಾಹ್ನ 1.15ರ ಪ್ರದರ್ಶನಕ್ಕೆ ಅಭಿಮಾನಿಗಳ ಜತೆ ಸಿನಿಮಾ ನೋಡಲು ಮೈಸೂರು ರಸ್ತೆಯಲ್ಲಿರುವ ಸಿರ್ಸಿ ಸರ್ಕಲ್ ಬಳಿಯ ಗೋಪಾಲನ್ ಸಿನಿಮಾಸ್‌ಗೆ ಬರುತ್ತಿದ್ದೇನೆ. ಸಾಮಾಜಿಕ ಅಂತರ ಕಾಯ್ದುಕೊಂಡು ನಮ್ಮ ಎಚ್ಚರಿಕೆಯಲ್ಲಿ ನಾವು ಇದ್ದುಕೊಂಡು ಸಿನಿಮಾ ನೋಡಲು ಆರಂಭಿಸೋಣ. ಚಿತ್ರಮಂದಿರದಲ್ಲಿಸಿನಿಮಾ ನೋಡುವ ಖುಷಿ ಮತ್ತು ಸಂತೋಷವನ್ನು ಅನುಭವಿಸೋಣ. -ಇಂತಿ ನಿಮ್ಮವ” ಎಮ್ದು ನಟ ದುನಿಯಾ ವಿಜಯ್ ಬರೆದುಕೊಂಡಿದ್ದಾರೆ.