ಕರ್ನಾಟಕ

ಶುಕ್ರವಾರ ಕರ್ನಾಟಕ ಬಂದ್​ ಇಲ್ಲ…ಪ್ರತಿಭಟನೆಗೆ ಸೀಮಿತ ! ಸೆಪ್ಟೆಂಬರ್ 28 ರಂದು ಕರ್ನಾಟಕ ಬಂದ್

Pinterest LinkedIn Tumblr

ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ, ಇದೇ 25 ರಂದು ಕರ್ನಾಟಕ ಬಂದ್ ಮಾಡಲ್ಲ, ಅಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಿರುವ ರಾಜ್ಯ ರೈತ ಸಂಘ, 28 ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಿದೆ.

ಅಖಿಲ ಭಾರತ ಕೃಷಿ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 9ಕ್ಕೂ ಹೆಚ್ಚು ರೈತ ಸಂಘಟನೆಗಳು, 10ಕ್ಕೂ ಹೆಚ್ಚು ದಲಿತ‌ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳು ಈ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ‌ ನಾಗೇಂದ್ರ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

’25ಕ್ಕೆ ರಾಷ್ಟ್ರೀಯ ಬಂದ್ ಗೆ ಕರೆ ನೀಡಿರುವುದರಿಂದ ಅಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ 5000ಕ್ಕೂ ಹೆಚ್ಚು ಜನ ಸೇರಿ ಧರಣಿ ನಡೆಸಿ, ರಸ್ತೆ ತಡೆದು ಪ್ರತಿಭಟನೆ‌ ನಡೆಸುತ್ತೇವೆ’ ಎಂದು ಕರ್ನಾಟಕ‌ ಪ್ರಾ‌ಂತ ರೈತ ಸಂಘದ ಮಾರುತಿ ಮಾನ್ಪಡೆ ತಿಳಿಸಿದರು.

‘ಸಿದ್ಧತೆ ಮಾಡಿಕೊಳ್ಳಲು ಸಮಯ ಬೇಕಾಗಿರುವುದರಿಂದ 28 ಕ್ಕೆ ರಾಜ್ಯ ಬಂದ್ ಮಾಡಲಾಗುವುದು. 25ಕ್ಕೆ ಬೆಂಗಳೂರಿನಲ್ಲಿ ಮಾತ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.

ರೈತ ಮುಖಂಡರಲ್ಲಿಯೇ ಗೊಂದಲ

ಸೆ. 25ಕ್ಕೆ ನಡೆಸುವ ಪ್ರತಿಭಟನೆಯ ಸ್ವರೂಪದ‌ ಬಗ್ಗೆ ರೈತ ಮುಖಂಡರಲ್ಲಿಯೇ ಗೊಂದಲ ಉಂಟಾಗಿದೆ.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು, 25ಕ್ಕೆ ಬೆಂಗಳೂರಿನಲ್ಲಿ ಮಾತ್ರ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರೆ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್, ‘ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕು ಮಟ್ಟದಲ್ಲಿ 25ಕ್ಕೆ ಪ್ರತಿಭಟನೆ ನಡೆಸಲಾಗುವುದು. ರಸ್ತೆ ತಡೆ ನಡೆಸಿ, ಜೈಲ್ ಭರೋ ಚಳವಳಿ ನಡೆಯುತ್ತದೆ’ ಎಂದು ಹೇಳಿದರು.

’26ಕ್ಕೆ ಅಧಿವೇಶನ ಮುಗಿಯಲಿದೆ. ಹೀಗಾಗಿ 25ಕ್ಕೆ ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. 28ರ ರಾಜ್ಯ ಬಂದ್ ಮಾಡುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ’ಎಂದರು.

Comments are closed.