
ಬೆಂಗಳೂರು: ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಒಂದು ಕಡೆ ಕೊರೋನಾ ಇನ್ನೊಂದೆಡೆ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.
ಬೀದರ್ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ವರುಣನ ಹೊಡೆತಕ್ಕೆ ಬೀದರ್ ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಭಾಲ್ಕಿ ತಾಲೂಕಿನ ಸಾಯಿಗಾಂವ್ ಸೇತುವೆ ದಾಟುವಾಗ ಬೈಕ್ ಸವಾರ ಮನೋಜ್ ಗುಂಡಾಜೀ ಕೊಚ್ಚಿ ಹೋಗಿದ್ದಾರೆ.
ಜನವಾಡ ಗ್ರಾಮದ ಸರ್ಕಾರಿ ಆಸ್ಪತ್ರೆ ಪಕ್ಕದ ಮನೆ ಗೋಡೆ ಕುಸಿದು 72 ವರ್ಷದ ಗುರಮ್ಮ ಸಾವು ಕಂಡಿದ್ದಾರೆ. ಹಾಲಹಳ್ಳಿಯ ಅರ್ಜುನ್ ಎಂಬುವರು ಉಕ್ಕಿ ಹರಿಯುತ್ತಿದ್ದ ಹಳ್ಳದ ಪಾಲಾಗಿದ್ದಾರೆ. ಗದಗ ತಾಲೂಕಿನ ಕಣವಿ ಗ್ರಾಮದಲ್ಲಿ ಗುಳಪ್ಪ ಹಾಗೂ ರೇಣವ್ವ ಎಂಬುವರ ಮನೆ ಕುಸಿದಿದೆ. ಗಾಯಗೊಂಡ ದಂಪತಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸವಕಲ್ಯಾಣ ತಾಲ್ಲೂಕಿನ ಖೇರ್ಡಾ (ಕೆ) ಗ್ರಾಮದಿಂದ ಲೇಂಗಟಿ ಗ್ರಾಮದ ಸಂಪರ್ಕ ರಸ್ತೆ ಕಡಿತವಾಗಿದೆ. ಔರಾದ್ ತಾಲೂಕಿನ ಮುಧೋಳ(ಬಿ)ಗ್ರಾಮದ ರೈತ ಶಿವಕಾಂತ ಚನ್ನಬಸಪ್ಪಾ ಬೆಳೆದ ಶುಂಠಿ ಭಾರಿ ಮಳೆಗೆ ಹಾಳಾಗಿದೆ. ಬಸವಕಲ್ಯಾಣ ತಾಲೂಕಿನ ಗೋರ್ಟಾ ಗ್ರಾಮದಲ್ಲಿ ಮನೆಗೆ ನೀರು ನುಗ್ಗಿ ಜನರು ಪರದಾಡಿದ್ರು.
ರಾಯಚೂರಿನಲ್ಲಿ ತಡರಾತ್ರಿ ಧಾರಾಕಾರವಾಗಿ ಮಳೆ ಸುರಿದಿದೆ. ಹಲವೆಡೆ ಭಾರೀ ಪ್ರಮಾಣದ ನೀರು ಮನೆಯೊಳಗೆ ನುಗ್ಗಿದೆ. ರಾಯಚೂರು ತಾಲೂಕಿನ ಇಡಪನೂರಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು. ಭಾರಿ ಮಳೆ ಬಿದ್ದ ಪರಿಣಾಮ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮನೆಯ ಒಳಗಡೆ ಕೊಳಚೆ ನೀರು ನುಗ್ಗಿದ್ದರಿಂದ ರಾತ್ರಿಯಿಡಿ ನಿವಾಸಿಗಳು ಪರದಾಡಿದ್ರು. ಮಳೆಯಿಂದಾಗಿ ಹತ್ತಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ನೂರಾರು ರೈತರು ಕಂಗಾಲ್ ಆಗಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರೆದಿದೆ. ಕಾಗಿಣಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಕಲಬುರಗಿ – ಸೇಡಂ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಮಳಖೇಡ ಬಳಿಯ ಸೇತುವೆ ಮೇಲೆ ನೀರು ಹರಿಯುತ್ತಿದ್ದು. ಸತತ 36 ಗಂಟೆಯಿಂದ ಸೇತುವೆ ಮೇಲೆ ನೀರು ನಿಂತಿದೆ.
ಆಳಂದ ಬೊಮ್ಮನಹಳ್ಳಿ ಗ್ರಾಮದ ಬಳಿ ಮಳೆ ನೀರಿನಲ್ಲಿ ಕಾರು ಕೊಚ್ಚಿ ಹೋಗಿದ್ದು. ಕಾರಿನಲ್ಲಿದ್ದ ಇಬ್ಬರ ಪೈಕಿ ಒಬ್ಬನನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಯಳಸಂಗಿ ಗ್ರಾಮದ ರಾಜು ಕುಂಬಾರ್ ಮತ್ತು ಸಿದ್ದು ಕಾರಿನಲ್ಲಿ ತೆರಳುತ್ತಿದ್ದರು. ಮಳೆ ನೀರಿನಲ್ಲಿ ಕಾರು ಸಿಲುಕಿದಾಗ ರಾಜುನನ್ನು ಬಚಾವ್ ಮಾಡಿದ್ದು, ಸಿದ್ದು ಕೊಚ್ಚಿ ಹೋಗಿದ್ದಾನೆ. ಆತನಿಗಾಗಿ ನಿಂಬರ್ಗಾ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Comments are closed.