
ಹುಬ್ಬಳ್ಳಿ; ಹುಬ್ಬಳ್ಳಿಯಲ್ಲಿ ಭಾವೈಕ್ಯತೆಯ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಬಿಡ್ನಾಳದಲ್ಲಿ ಒಂದೇ ಪೆಂಡಾಲ್‌ನಲ್ಲಿ ಗಣೇಶ ಮೂರ್ತಿ ಮತ್ತು ಮೊಹರಂನ ಪಂಜಾಗಳನ್ನು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿದೆ. ಪಾದಗಟ್ಟಿ ಪ್ರದೇಶದಲ್ಲಿನ ಹಿಂದೂ ಮತ್ತು ಮುಸ್ಲಿಂ ಸಮಾಜದ ಜನರು ಗಣೇಶೋತ್ಸವ ಹಾಗೂ ಮೊಹರಂ ಹಬ್ಬವನ್ನು ಒಟ್ಟಾಗಿ ಆಚರಿಸುವ ಮೂಲಕ ಸಹಬಾಳ್ವೆಯ ಸಂದೇಶ ಸಾರುತ್ತಿದ್ದಾರೆ.
ಬಿಡ್ನಾಳದ ಪಾದಗಟ್ಟಿ ಪ್ರದೇಶದಲ್ಲಿ ಕಳೆದ 45 ವರ್ಷಗಳಿಂದ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಣೆ ಮಾಡಲಾಗುತ್ತಿದೆ. ಪ್ರತಿವರ್ಷ ಸತ್ಯ ನಾರಾಯಣ ಪೂಜೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ, ಅನ್ನಪ್ರಸಾದ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಕೊರೋನಾ ಮಾರ್ಗಸೂಚಿಯಂತೆ ಈ ಬಾರಿ ಸರಳವಾಗಿ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ. ಮೂರೂವರೆ ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ವೇದಿಕೆಯ ಪಕ್ಕದಲ್ಲಿಯೇ ಮೊಹರಂ ಹಬ್ಬದ ಪಂಜಾಗಳನ್ನು ಇರಿಸಲಾಗಿದೆ. ಒಂಭತ್ತು ಪಂಜಾಗಳಿಗೆ ಮುಸ್ಲಿಂ ಸಂಪ್ರದಾಯದಂತೆ ಧೂಪ ಹಾಕಿ, ಊದುಬತ್ತಿ ಬೆಳಗಲಾಗುತ್ತಿದೆ. ಹರಕೆ ಹೊತ್ತವರು ಲೋಹದ ಕುದುರೆ ಇರಿಸಿ ಸಕ್ಕರೆ ಅರ್ಪಿಸುತ್ತಿದ್ದಾರೆ.
ಬಿಡ್ನಾಳದ ಪಾದಗಟ್ಟಿ ಪ್ರದೇಶದಲ್ಲಿ 900 ಮನೆಗಳಿವೆ. ಅದರಲ್ಲಿ 120 ಮುಸ್ಲಿಂ ಕುಟುಂಬಗಳಿವೆ. ಇಲ್ಲಿನ ಹಿಂದೂ- ಮುಸ್ಲಿಂ ಸಾಮರಸ್ಯಕ್ಕೆ ಸುದೀರ್ಘ ಇತಿಹಾಸವೇ ಇದೆ. 1985, 1986 ಮತ್ತು 1987 ರಲ್ಲಿ ಗಣೇಶೋತ್ಸವ ಮತ್ತು ಮಹೊರಂ ಹಬ್ಬಗಳು ಒಟ್ಟಾಗಿ ಬಂದಿದ್ದವು. ಆಗ ಸ್ಥಳೀಯ ಹಿರಿಯರೆಲ್ಲಾ ಸೇರಿ ಹಿಂದೂ ಮತ್ತು ಮುಸ್ಲಿಂ ಉತ್ಸವ ಕಮಿಟಿ ಮಾಡಿದ್ದರು. ಗಜಾನನ ಹಾಗೂ ಮೊಹರಂ ಉತ್ಸವ ಸಮಿತಿ ಮಾಡಿಕೊಂಡು ಭಾವೈಕ್ಯತೆಯಿಂದ ಹಬ್ಬವನ್ನು ಆಚರಿಸಿದ್ದರು. ಅದೇ ಸಂಪ್ರದಾಯವನ್ನು 35 ವರ್ಷಗಳ ನಂತರವೂ ಇಲ್ಲಿನ ಜನ ಪಾಲಿಸುತ್ತಿದ್ದಾರೆ.
ಕಳೆದ 2018, 2019 ರಲ್ಲಿಯೂ ಎರಡೂ ಹಬ್ಬಗಳು ಒಟ್ಟಿಗೆ ಬಂದಿದ್ದರಿಂದ ಒಂದಾಗಿ ಆಚರಣೆ ಮಾಡಿದ್ದರು. ಈ ವರ್ಷವೂ ಗಣೇಶೋತ್ಸವ ಮತ್ತು ಮೊಹರಂ ಒಟ್ಟಿಗೆ ಬಂದಿರುವ ಕಾರಣ ಧರ್ಮ ಸಮನ್ವಯತೆಯಿಂದ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಆಗಸ್ಟ್ 22 ರಂದು ಗಣೇಶ ಮೂರ್ತಿ ಪ್ರತಿಷ್ಠಾಪಣೆ ಮಾಡಲಾಗಿದೆ. ಅದೇ ಪೆಂಡಾಲ್‌ನಲ್ಲಿ ಆಗಸ್ಟ್ 25ರಂದು ಮೊಹರಂ ಪಂಜಾಗಳನ್ನು ಇಡಲಾಗಿದೆ. ಒಂಭತ್ತು ದಿನ ಪೂಜಿಸಲ್ಪಡುವ ವಿಘ್ನ ನಿವಾರಕನನ್ನು ಆಗಸ್ಟ್ 30 ರಂದು ವಿಸರ್ಜಿಸಲಾಗುತ್ತಿದೆ. ಆರು ದಿನ ಪೂಜಿಸುವ ಪಂಜಾಗಳಿಗೂ ಆಗಸ್ಟ್ 30ರಂದೇ ವಿದಾಯ ಹೇಳಲಾಗುತ್ತಿದೆ. ಗಜಾನನ ಹಾಗೂ ಮೊಹರಂ ಉತ್ಸವ ಸಮಿತಿ ಅಧ್ಯಕ್ಷ ಮೋಹನ್ ಅಸುಂಡಿ ಹಾಗೂ ಕಾರ್ಯದರ್ಶಿ ಮಹಮ್ಮದ್‌ಸಾಬ್ ನದಾಫ್ ನೇತ್ರತ್ವದಲ್ಲಿ ಒಂಭತ್ತು ಜನರ ಸಮಿತಿ ಐಕ್ಯತೆಯಿಂದ ಹಬ್ಬವನ್ನು ಆಚರಿಸುತ್ತಿದೆ. ಸಂಕಷ್ಟ ಹರ ಗಣೇಶ ಮತ್ತು ಪಂಜಾಗಳು ಜನರ ಗಮನ ಸೆಳೆಯುತ್ತಿವೆ. ಭಕ್ತರು ಬಿಡ್ನಾಳದ ಪಾದಗಟ್ಟಿ ಪೆಂಡಾಲ್‌ಗೆ ಬಂದು ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಿದ್ದಾರೆ.
Comments are closed.