ಕರ್ನಾಟಕ

ದೇವೇಗೌಡರ ನಿವಾಸಕ್ಕೆ ಔತಣಕೂಟಕ್ಕೆ ಹೋದ ಗೋಪಾಲಯ್ಯ ವಿರುದ್ಧ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

Pinterest LinkedIn Tumblr


ಹಾಸನ: ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಹೊಳೆನರಸೀಪುರ ನಿವಾಸಕ್ಕೆ ಔತಣಕೂಟಕ್ಕೆ ತೆರಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ವಿರುದ್ಧ ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.

ಜೆಡಿಎಸ್ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದು ಹಾಸನ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿರುವುದನ್ನು ಲೆಕ್ಕಿಸದ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಹಾಗೂ ಶಾಸಕರೊಂದಿಗೆ ಸಖ್ಯ ಬೆಳೆಸಿರುವುದು ಶಾಸಕ ಪ್ರೀತಂ ಜೆ. ಗೌಡರ ಕೋಪ ನೆತ್ತಿಗೇರಲು ಕಾರಣವಾಗಿದೆ. ಇದೇ ಕಾರಣಕ್ಕೆ ಸಚಿವರು ಹೇಮಾವತಿ ಜಲಾಶಯಕ್ಕೆ ಬಾಗಿನ ಬಿಡುವ ವೇಳೆ ಶಾಸಕ
ಪ್ರೀತಂ ಗೌಡ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಎಪಿಎಂಸಿ ಚುನಾವಣೆಯಲ್ಲಿ ತಮ್ಮ ಸ್ವಂತ ಅತ್ತೆ ಜೆಡಿಎಸ್ ಅಭ್ಯರ್ಥಿಯಾಗಿದ್ದರೂ, ಅವರ ವಿರುದ್ಧವೇ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸೆಣಸಾಟ ನಡೆಸಿ ಪಕ್ಷನಿಷ್ಠೆ ಪ್ರದರ್ಶಿಸಿದ್ದ ಪ್ರೀತಂ ಗೌಡ ಇದೀಗ ಸಚಿವ ಗೋಪಾಲಯ್ಯ ಅವರ ನಡೆಯ ವಿರುದ್ಧ ಮುನಿಸಿಕೊಂಡಿದ್ದಾರೆ. ಈ ಸಂಗತಿ ಸಚಿವ ಗೋಪಾಲಯ್ಯ ಅವರ ಗಮನಕ್ಕೂ ಬಂದಿದ್ದು, ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಕೆಆರ್ ಪೇಟೆ ಉಪ ಚುನಾವಣೆಯಲ್ಲಿ ಕೊಟ್ಟ ಜವಾಬ್ದಾರಿ ಸಮರ್ಥ ನಿರ್ವಾಹಣೆ, ಹಾಸನ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಪ್ರತಿ ಹಂತದಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಹೈಕಮಾಂಡ್ ನಲ್ಲಿ ವರ್ಚಸ್ಸು ವೃದ್ಧಿಸಿಕೊಂಡಿರುವ ಪ್ರೀತಂ ಗೌಡ ಜಿಪಂ,ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಗೆ ತಕ್ಕ ಟಾಂಗ್ ನೀಡಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಚಿವ ಗೋಪಾಲಯ್ಯ ಜೆಡಿಎಸ್ ಜತೆ ಹಳೇ ಸಂಬಂಧವನ್ನು ಮುಂದುವರಿಸಲು ಮುಂದಾಗಿದ್ದಾರೆ ಎಂಬ ಸಂಶಯದ ನೋಟಕ್ಕೆ ಪುಷ್ಠಿ ನೀಡುವಂತೆ, ಪ್ರತಿಯೊಂದು ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಶಾಸಕ ರೇವಣ್ಣ ಸಾಹೇಬ್ರು ಹೇಳಿದಂತೆ ಎಂಬ ಸಚಿವರ ಉದ್ಗಾರ ಶಾಸಕರ ಕೋಪ ನೆತ್ತಿಗೇರಲು ಕಾರಣವಾಗಿದೆ ಎಂಬ ಸಂಗತಿ ಬಿಜೆಪಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Comments are closed.