ಬೆಂಗಳೂರು(ಆ. 12): ನಗರದಲ್ಲಿ ನಿನ್ನೆ ನಡೆದ ತನ್ನ ಕೈವಾಡ ಇದೆ ಎಂಬ ಆರೋಪಗಳನ್ನ ಎಸ್ಡಿಪಿಐ ಬಲವಾಗಿ ತಳ್ಳಿಹಾಕಿದೆ. ಗಲಭೆಗಳ ಹಿಂದೆ ನಾವಿಲ್ಲ. ಪೊಲೀಸರ ನಿರ್ಲಕ್ಷ್ಯತನವೇ ಇದಕ್ಕೆ ಕಾರಣ ಎಂದು ಎಸ್ಡಿಪಿಐ ಆರೋಪಿಸಿದೆ. ಪ್ರವಾದಿಯವರನ್ನು ನಿಂದಿಸಿದವರ ವಿರುದ್ಧ ದೂರು ನೀಡಲು ಹೋದಾಗ ಪೊಲೀಸರು ಅದನ್ನು ಸ್ವೀಕರಿಸಲು ಬಹಳ ವಿಳಂಬ ಮಾಡಿದರು. ಇದರಿಂದ ಜನರು ಪ್ರತಿಭಟನೆ ನಡೆಸಿದ್ದಾರೆ ಎಂದು ಆ ಸಂಘಟನೆ ಸ್ಪಷ್ಪಪಡಿಸಿದೆ. ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಸ್ಡಿಪಿಐ ಅಧ್ಯಕ್ಷ ಮಹಮ್ಮದ್ ಷರೀಫ್ ಮೊದಲಾದವರು, ಬೆಂಗಳೂರು ಹೊತ್ತಿ ಉರಿಯಲು ಪೊಲೀಸರೇ ಕಾರಣ ಎಂದು ಹೇಳಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನ ನಿಂದಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ. ಅದರ ವಿರುದ್ಧ ಜನರು ಪ್ರತಿಭಟನೆ ನಡೆಸಿದರು. ಈ ನವೀನ್ ಈ ರೀತಿ ಮಾಡಿದ್ದು ಇದೇ ಮೊದಲಲ್ಲ. ತನ್ನ ಸೋದರ ಮಾವನ ಅಧಿಕಾರದಿಂದ ಈತ ಈವರೆಗೆ ಬಚಾವಾಗಿದ್ದಾರೆ. ಈಗ ಸಮಾಜದಲ್ಲಿ ಅಶಾಂತಿ ಮೂಡಿಸುವ ಉದ್ದೇಶದಿಂದಲೇ ಪೈಗಂಬರ್ ಅವರನ್ನ ಅವಹೇಳನ ಮಾಡಿ ಪೋಸ್ಟ್ ಹಾಕಿದ್ದಾರೆ. ಈತ ವಿರುದ್ಧ ದೂರು ನೀಡಲು ಹೋದಾಗ ಪೊಲೀಸರು ನಿರ್ಲಕ್ಷ್ಯತನ ತೋರಿದ್ದಾರೆ. ಸಂಜೆ 5ರಿಂದ 6:30ರವರೆಗೆ ಸಮಾಧಾನದಿಂದ ಕಾದರೂ ಪೊಲೀಸರು ದೂರು ಸ್ವೀಕರಿಸಿಲ್ಲ, ಯಾವುದೇ ಕ್ರಮ ಕೈಗೊಂಡಿಲ್ಲ. ಜನರು ಬಳಿಕ ಪ್ರತಿಭಟನೆ ಮಾಡಿದರು. ನಂತರ ಡಿಸಿಪಿ ಶರಣಪ್ಪ ಬಂದು ಹೇಳಿದ ಮೇಲೆ ದೂರು ಸ್ವೀಕರಿಸಿದರು ಎಂದು ಎಸ್ಡಿಪಿಐ ಮುಖಂಡರು ನಿನ್ನೆ ಘಟನೆಯ ವಿವರ ನೀಡಿದ್ದಾರೆ.
ಪೊಲೀಸರ ನಿಧಾನಗತಿಯ ಕ್ರಮವೇ ಎಲ್ಲದಕ್ಕೂ ಕಾರಣ. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದೆ ಎಂದು ತಿಳಿದೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಂಗಳೂರು ಹೊತ್ತಿ ಉರಿಯಲು ಪೊಲೀಸರೇ ಕಾರಣವಾಗಿದ್ದಾರೆ ಎಂದವರು ಅಭಿಪ್ರಾಯಪಟ್ಟಿದ್ಧಾರೆ.
ಗಲಭೆಯಲ್ಲಿ ಎಸ್ಡಿಪಿಐ ಕೈವಾಡ ಇಲ್ಲ. ದೂರು ನೀಡಲು ಠಾಣೆಗೆ ಹೋಗಿದ್ದು ನಮ್ಮ ಸಂಘಟನೆಯವರೇ. ಗಲಭೆಯಲ್ಲಿ ಭಾಗಿಯಾಗಿದ್ದಾರೆಂದು ನಮ್ಮ ಸಂಘಟನೆಯ ಕೆಲ ಹೆಸರುಗಳನ್ನ ಹೇಳಲಾಗುತ್ತಿದೆ. ಆದರೆ, ಆ ವ್ಯಕ್ತಿಗಳೇ ನಿನ್ನೆ ಶಾಂತಿ ಕಾಪಾಡಲು ಶ್ರಮಿಸಿದ್ದರು. ಅವರದ್ದೇ ವಾಹನಗಳು ಗಲಭೆಯಲ್ಲಿ ಸುಟ್ಟು ಕರಕಲಾಗಿವೆ. ನಮ್ಮದು ಜನಪರ ಸಂಘಟನೆಯಾಗಿದೆ. ಇಂಥ ಕೃತ್ಯಕ್ಕೆ ಉತ್ತೇಜನ ನೀಡುವುದಿಲ್ಲ. ಗಲಭೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾವೇ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದು ಎಸ್ಡಿಪಿಐ ಮುಖಂಡ ಮೊಹಮ್ಮದ್ ಷರೀಫ್ ತಿಳಿಸಿದ್ದಾರೆ.
ಇನ್ನು, ಪೊಲೀಸರಿಗೆ ಟಾರ್ಗೆಟ್ ಆದ ಎಸ್ಡಿಪಿಐ ಕಾರ್ಯಕರ್ತ ಮುಜಾಮಿಕ್ ಪಾಷಾ ಅವರಿಗೂ ಈ ಗಲಭೆಗೂ ಯಾವುದೇ ಸಂಬಂಧ ಇಲ್ಲ. ಅವರು ಪೊಲೀಸರ ಜೊತೆಯೇ ಕೆಲಸ ಮಾಡುತ್ತಿದ್ದವರು. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು ಷರೀಫ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಈ ಘಟನೆಯಲ್ಲಿ ಪೊಲೀಸರ ನಿರ್ಲಕ್ಷ್ಯತನವೇ ಪ್ರಮುಖ ಕಾರಣ ಎಂದು ಕಿಡಿಕಾರಿದ್ದಾರೆ. ಅವಹೇಳನಕಾರಿ ಹೇಳಿಕೆ ನೀಡಿದ ನವೀನ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ ಕ್ರಮ ಕೈಗೊಂಡಿದ್ದರೆ ಈ ಘಟನೆ ನಡೆಯಲು ಅವಕಾಶವಾಗುತ್ತಿರಲಿಲ್ಲ. ಪೊಲೀಸರು ತಾರತಮ್ಯ ತೋರಿದ್ಧಾರೆ. ಇದು ತಪ್ಪು ಎಂದು ಡಿಕೆಶಿ ಆರೋಪಿಸಿದ್ದಾರೆ. ಹಾಗೆಯೇ, ಗಲಭೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಿ. ಜೊತೆಗೆ, ಗಲಭೆಗೆ ಕಾರಣರಾದವರ ಮೇಲೂ ಕ್ರಮ ಕೈಗೊಳ್ಳಲಿ ಎಂದವರು ಒತ್ತಾಯಿಸಿದ್ದಾರೆ. ಈ ಘಟನೆಯನ್ನು ಕಾಂಗ್ರೆಸ್ ಪಕ್ಷದ ತಂಡವೊಂದು ಪ್ರತ್ಯೇಕವಾಗಿ ತನಿಖೆ ನಡೆಸಿ ಸತ್ಯಾಸತ್ಯತೆ ಕಂಡುಹಿಡಿಯುವ ಕೆಲಸ ಮಾಡುತ್ತದೆ ಎಂದೂ ಕೆಪಿಸಿಸಿ ಅಧ್ಯಕ್ಷರು ತಿಳಿಸಿದ್ದಾರೆ.ಇದನ್ನೂ ಓದಿ: DJ Halli Violence: ಡಿಜೆ ಹಳ್ಳಿ ತನಿಖೆ ಸಿಬಿಐಗೆ ವಹಿಸಲ್ಲ, ನಷ್ಟವನ್ನು ಗಲಭೆಕೋರರಿಂದಲೇ ಭರಿಸಲಾಗುತ್ತದೆ; ಬೊಮ್ಮಾಯಿ ಸ್ಪಷ್ಟನೆ
ಗಲಭೆ ನಡೆದ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ಅವರು ತಮ್ಮ ಫೇಸ್ಬುಕ್ನಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದರು. ಇದು ಗಲಭೆಗೆ ಕಿಡಿ ಹೊತ್ತಿಕೊಳ್ಳಲು ಕಾರಣವಾಗಿದೆ. ಮುಸ್ಲಿಮ್ ಸಮುದಾಯಕ್ಕೆ ಸೇರಿದ ಸುಮಾರು 3-4 ಸಾವಿರದಷ್ಟ ಉದ್ರಿಕ್ತ ಜನರ ಗುಂಪು ನಿನ್ನೆ ರಾತ್ರಿ ಡಿಜೆ ಹಳ್ಳಿ, ಕಾಡುಗೊಂಡನಹಳ್ಳಿ ಹಾಗೂ ಕಾವಲ್ ಬೈರಸಂದ್ರದಲ್ಲಿ ದೊಡ್ಡ ಗಲಭೆ ನಡೆಸಿದೆ. ಶಾಸಕರ ಅಖಂಡರ ಇಡೀ ಮನೆಯನ್ನೇ ಸುಟ್ಟುಹಾಕಿದ್ದಾರೆ. ಅದೃಷ್ಟಕ್ಕೆ ಅವರ ಕುಟುಂಬ ಸದಸ್ಯರು ಸ್ವಲ್ಪದರಲ್ಲಿ ಬಚಾವಾಗಿದ್ದಾರೆ. ಕಿಡಿಗೇಡಿಗಳು ಸಿಕ್ಕಸಿಕ್ಕ ವಾಹನಗಳನ್ನ ಧ್ವಂಸ ಮಾಡಿದ್ದಾರೆ. ಪೊಲೀಸ್ ಠಾಣೆಗೂ ಹಾನಿ ಮಾಡಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ನಡೆಸಿದ ಫೈರಿಂಗ್ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಗಲಭೆಕೋರರ ಕಲ್ಲು ತೂರಾಟಕ್ಕೆ 60ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.
ಮೂರು ಪ್ರದೇಶಗಳಲ್ಲಿ ಗಲಭೆಗಳು ತೀವ್ರಮಟ್ಟದಲ್ಲಿ ಆಗಿವೆ. ಬೇರೆ ಪ್ರದೇಶಗಳಿಗೂ ಗಲಭೆ ವ್ಯಾಪಿಸುವ ಕಿಡಿಗೇಡಿಗಳ ಪ್ರಯತ್ನಗಳನ್ನ ಪೊಲೀಸರು ವಿಫಲಗೊಳಿಸಿದ್ದಾರೆ. ನಗರಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಗಲಭೆಯಲ್ಲಿ ಆಗಿರುವ ಹಾನಿಯಲ್ಲಿ ಕಿಡಿಗೇಡಿಗಳಿಂದಲೇ ನಷ್ಟಭರಿಸಲು ಗೃಹ ಇಲಾಖೆ ಕ್ರಮ ಕೈಗೊಳ್ಳಲು ನಿರ್ಧರಿಸುವ ಸಾಧ್ಯತೆ ಇದೆ.
Comments are closed.