ಕರ್ನಾಟಕ

ಮಳೆ ತಗ್ಗಿದರೂ ಕೊಡಗಿನಲ್ಲಿ ಮುಂದುವರೆದ ಅವಘಡಗಳು

Pinterest LinkedIn Tumblr


ಕೊಡಗು (ಆಗಸ್ಟ್‌ 12): ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಕಾವೇರಿ ನದಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ತುಂಬಿ ಹರಿದು 52 ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದಲ್ಲಿ ಮುಳುಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಆದರೆ, ಎರಡು ದಿನಗಳಿಗೆ ಹೋಲಿಸಿದರೆ ಮಂಗಳವಾರ ಮತ್ತು ಬುಧವಾರ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆಗೊಮ್ಮೆ, ಈಗೊಮ್ಮೆ ಬಿಟ್ಟು ಬಿಟ್ಟು ಮಳೆ ಸುರಿದಿದೆ.

ಮಳೆ ಕಡಿಮೆ ಆಗಿದ್ದರಿಂದ ತಲಕಾವೇರಿಯಲ್ಲಿ ಕುಸಿದ ಗಜಗಿರಿ ಬೆಟ್ಟದ ಅವಶೇಷಗಳ ಅಡಿಯಲ್ಲಿ ಕಣ್ಮರೆಯಾಗಿರುವ ಅರ್ಚಕರ ಕುಟುಂಬದ ಇನ್ನೂ ಮೂವರ ಹುಡುಕಾಟಕ್ಕೆ ಮತ್ತಷ್ಟು ಅನುಕೂಲವಾಗಿತ್ತು. ನಿನ್ನೆ ಅರ್ಚಕ ನಾರಾಯಣ ಆಚಾರ್ ಅವರ ಮೃತದೇಹ ಸಿಕ್ಕಿದ್ದ ಸ್ಥಳದಿಂದಲೇ ಇಂದು ಕೂಡ ರಕ್ಷಣಾ ಕಾರ್ಯಚರಣೆ ಆರಂಭಿಸಲಾಗಿತ್ತು.

ಆದರೆ, ಇಡೀ ದಿನದ ಕಾರ್ಯಚರಣೆ ನಡೆಸಿದರೂ ಮೂವರ ಯಾವುದೇ ಸುಳಿವು ಸಿಗಲಿಲ್ಲ. ತಲ ಕಾವೇರಿಯಲ್ಲಿ ಈಗಲೂ ಎಡಬಿಡದೆ ತುಂತುರು ಮಳೆ ಸುರಿಯುತ್ತಿದೆ. ಇದರ ನಡುವೆಯೇ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ 75 ಜನರ ತಂಡ ಕಾರ್ಯಚರಣೆ ನಡೆಸಿತು. ಮತ್ತೊಂದೆಡೆ ಕಾವೇರಿ ನದಿ ಪ್ರವಾಹ ಇಳಿದಿದ್ದರೂ ಮಳೆ ನಿಂತರು ಮರದ ಹನಿ ಮಾತ್ರ ನಿಲ್ಲೋಲ್ಲ ಎನ್ನೋ ಹಾಗೆ ಪ್ರವಾಹ ಇಳಿದಿದ್ದರೂ ಅವಘಡಗಳು ಮಾತ್ರ ನಿಂತಿಲ್ಲ.

ಕೊಡಗಿನಲ್ಲಿ ನಾಲ್ಕು ದಿನಗಳ ಕಾಲ ಉಕ್ಕಿದ ಹರಿದಿದ್ದ ಕಾವೇರಿ ಪ್ರವಾಹದ ಬಳಿಕ ಹಲವೆಡೆ ಕಾವೇರಿ ನದಿ ತಟದ ಭೂಮಿ ಕುಸಿದುಹೋಗುತ್ತಿದೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರದಿಂದ ಗುಹ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾವೇರಿ ನದಿಗೆ ಆಪೋಶನ ಆಗುತ್ತಿದೆ. ಬಾರೀ ಪ್ರಮಾಣದಲ್ಲಿ ರಸ್ತೆಯ ಮಣ್ಣು ಕಾವೇರಿ ನದಿಗೆ ಕುಸಿದು ಹೋಗುತ್ತಿರುವುದು ಜನರನ್ನು ಆತಂಕಕ್ಕೆ ದೂಡಿದೆ.

Comments are closed.