ಕರ್ನಾಟಕ

ಕೆಆರ್​ಎಸ್​ನಿಂದ ನೀರು ಬಿಡುಗಡೆ; ನದಿ ದಂಡೆಯ ಪ್ರವಾಸಿ ತಾಣಗಳಲ್ಲಿ ಪ್ರವಾಹ ಭೀತಿ

Pinterest LinkedIn Tumblr


ಮಂಡ್ಯ: ಸಕ್ಕರೆನಾಡಿನ ರೈತರ ಜೀವನಾಡಿ ಎನಿಸಿರುವ ಕೆ.ಆರ್.ಎಸ್. ಜಲಾ ಶಯ ಬಹುತೇಕ ಭರ್ತಿಯಗುವ ಹಂತದಲ್ಲಿದೆ. ಜಲಾಶಯದಿಂದ ನದಿ ಮೂಲಕ 75 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದು ಜಲಾಶಯ‌ ಭರ್ತಿಯಾಗಲಿರುವ ಸುದ್ದಿ‌ ರೈತರಿಗೇನೋ ಸಂತಸ ತಂದಿದೆ. ಆದರೆ, ಡ್ಯಾಂ ಕೆಳಭಾಗದ ಜನರಿಗೆ ಆತಂಕ ಮೂಡಿಸಿದೆ. ಡ್ಯಾಂ ಕೆಳಭಾಗದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಆರ್​ಎಸ್‌ ಜಲಾಶಯಕ್ಕೆ ದೊಡ್ಡ ಪ್ರಮಾಣದಲ್ಲಿ ನೀರು ಬರುತ್ತಿದ್ದು ಜಲಾಶಯದ ನೀರಿನ‌‌ಮಟ್ಟ 120 ಅಡಿ ದಾಟಿದೆ. ಭರ್ತಿಯಾಗಲು ಇನ್ನು ಕೇವಲ 4 ಅಡಿ ಬಾಕಿ ಇದೆ. ಜಲಾಶಯಕ್ಕೆ ಸಾಕಷ್ಟು ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣದಿಂದ 75 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ನದಿಗೆ ಬಿಡಲಾಗ್ತಿದೆ. ಹೀಗಾಗಿ ನದಿ ದಂಡೆಯ ಪ್ರವಾಸಿ ತಾಣಗಳಾದ ಬಲಮುರಿ, ರಂಗನತಿಟ್ಟು ಪಕ್ಷಿಧಾಮ, ಸ್ನಾಘಟ್ಟ, ಸಂಗಮ, ವೆಲ್ಲೆಸ್ಲಿ ಸೇತುವೆ ಈಗ ಪ್ರವಾಹದ ಅಪಾಯದಲ್ಲಿವೆ. ಅದರಲ್ಲೂ ವೆಲ್ಲೆಸ್ಲಿ‌ ಸೇತುವೆ ಬಳಿ ಹೆಚ್ಚು ಪ್ರವಾಹ ಭೀತಿ ಇದೆ. ಜನರು ಈ ಪ್ರವಾಹ ವೀಕ್ಷಣೆಗೆಂದೇ ಸೇತುವೆಯತ್ತ ಮುಗಿಬೀಳುತ್ತಿದ್ದಾರೆ.

ನಿಮಿಷಾಂಭದ ಬಳಿ ಸ್ನಾನಘಟ್ಟ ಜಲಾವೃತವಾಗಿದ್ದು ಸ್ಥಳೀಯ ತಾಲೂಕು ಆಡಳಿತ ಕೂಡ ಸಾಕಷ್ಟು ಮುಜಾಗ್ರತೆಯಾಗಿ ಅನೇಕ ಕ್ರಮಗಳನ್ನು ಕೈಗೊಂಡಿಂದೆ. ನಿಮಿಷಾಂಭ ದೇಗುಲದ ಬಳಿ ‌ಬ್ಯಾರಿಕೇಡ್ ಹಾಕಿ ಜನರ ಸಂಚಾರಕ್ಕೆ ಕಡಿವಾಣ ಹೇರಿದೆ. ವೆಲ್ಲೆಸ್ಲಿ ಸೇತುವೆ‌ ಮೇಲೆ ನಿಂತು ಪ್ರವಾಹ ವೀಕ್ಷಣೆ ಮಾಡುತ್ತಿರುವವರನ್ನು ನಿಯಂತ್ರಿಸಲು‌ ಸೇತುವೆಯ ಎರಡು ಬದಿ ತಡೆಗೋಡೆಗಳನ್ನು ನಿರ್ಮಿಸಲಾಗಿದೆ.

ಇನ್ನು ಕಾವೇರಿ ನದಿ ಪ್ರವಾಹವನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಸ್ಥಳೀಯ ತಾಲೂಕು ಆಡಳಿತದೊಂದಿಗೆ ಪ್ರವಾಹಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈ ಗೊಂಡಿದೆ. ಈ ಕುರಿತಾಗಿ ಇಂದು ಮಂಡ್ಯ ಡಿಸಿ ಡಾ. ವೆಂಕಟೇಶ್ ಖುದ್ದು ಶ್ರೀರಂಗಪಟ್ಟಣದ ತಾಲೂಕು ಆಡಳಿತದ ಅಧಿಕಾರಿಗಳೊಂದಿಗೆ ಕಾವೇರಿ ನದಿ ದಂಡೆಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರವಾಹ ಪೀಡಿತ ಪ್ರದೇಶಗಳಾದ ನಿಮಿಷಾಂಭ ದೇಗುಲ, ವೆಲ್ಲೆಸ್ಲಿ ಸೇತುವೆ, ದೊಡ್ಡೇಗೌಡನ ‌ಕೊಪ್ಪಲು, ಸ್ನಾನಘಟ್ಟ ಸೇರಿ ಹಲವು ಕಡೆ ಭೇಟಿ ನೀಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಒಟ್ಟಾರೆ, KRS ಡ್ಯಾಂ ನಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಯಿಂದ ಜಲಾಶಯದ ಕೆಳಭಾಗದಲ್ಲಿ ಕಾವೇರಿ ನದಿ ಪ್ರವಾಹ ಉಂಟಾಗುವ ಸಂಭವ ಇದೆ. ಹೀಗಾಗಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಪರಿಸ್ಥಿತಿ ನಿಭಾಯಿಸುತ್ತಿದೆ.

Comments are closed.