ಕರ್ನಾಟಕ

ಕಾಶಿ, ಮಥುರಾದಲ್ಲಿಯೂ ಮಸೀದಿ ತೆರವುಗೊಳಿಸಿ ಮಂದಿರ ನಿರ್ಮಾಣ: ಈಶ್ವರಪ್ಪ

Pinterest LinkedIn Tumblr

ಶಿವಮೊಗ್ಗ: ಅತ್ತ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆಯುತ್ತಿದ್ದರೆ, ಇತ್ತ ಸಚಿವ ಕೆ.ಎಸ್‌.ಈಶ್ವರಪ್ಪ ಅಯೋಧ್ಯೆಯ ರೀತಿಯಲ್ಲಿಯೇ ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳಿರುವ ಜಾಗದಲ್ಲಿ ದೇವಸ್ಥಾನ ಕಟ್ಟಲಾಗುವುದು ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದಾರೆ.

ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆ ಹಿನ್ನೆಲೆ ನಗರದ ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಧರ್ಮ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಂತೆ ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಕಾಶಿ ವಿಶ್ವನಾಥನ ಜಾಗ, ಮಥುರಾ ಕೃಷ್ಣನ ಸ್ಥಳವಾಗಿದ್ದು, ಅಲ್ಲಿ ದೇವರ ದರ್ಶನಕ್ಕೆ ತೆರಳಿದರೆ, ನಮಗೆ ಗುಲಾಮಗಿರಿ ಭಾವ ಕಾಡುತ್ತದೆ. ಅಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಲು ಆಗದ ಪರಿಸ್ಥಿತಿ ಇದೆ. ಅಲ್ಲಿರುವ ಮಸೀದಿಗಳು ನಮಗೆ ಗುಲಾಮರು ಎಂಬಂತೆ ಬಿಂಬಿಸುತ್ತವೆ ಎಂದು ತಿಳಿಸಿದ್ದಾರೆ.

ಅಯೋಧ್ಯೆಯ ರೀತಿಯಲ್ಲಿಯೇ, ಅಲ್ಲಿನ ಮಸೀದಿಗಳನ್ನು ತೆರವುಗೊಳಿಸಲಾಗುವುದು. ಶ್ರದ್ಧಾ ಕೇಂದ್ರಗಳಲ್ಲಿ ನಮ್ಮ ದೇವಸ್ಥಾನಗಳು ಧ್ವಂಸವಾಗಿರುವುದನ್ನು ನಾವು ಕಾಣುತ್ತೇವೆ. ಆದ್ದರಿಂದ ಮಥುರಾ, ಕಾಶಿಯಲ್ಲಿ ಭವ್ಯ ಮಂದಿರಗಳು ನಿರ್ಮಾಣವಾಗಿ ಮೂರು ಮಂದಿರಗಳು ಭಾರತದ ದೇಶಭಕ್ತಿಯ ಸಂಕೇತವಾಗಬೇಕು ಎಂದರು.

ಅಯೋಧ್ಯೆಯಲ್ಲಿ ಗುಲಾಮಗಿರಿಯ ಸಂಕೇತವಾಗಿದ್ದ ಮಸೀದಿಯನ್ನು ತೆರವುಗೊಳಿಸಲಾಗಿದೆ. ಅದರಂತೆ, ಮಥುರಾ ಹಾಗೂ ಕಾಶಿಯಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡುತ್ತೇವೆ. ಅಂದು ಲಾಠಿ ಗೋಲಿ ಖಾಯೆಂಗೆ ಮಂದೀರ್ ವಹೀ ಬನಾಯೇಂಗೆ ಎಂದು ಹೇಳಿದ್ದ ರೀತಿಯಲ್ಲಿಯೇ ಈಗ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ ಎಂದರು.

 

Comments are closed.