
ಬೆಂಗಳೂರು: ಪಾರ್ಕಿಂಗ್ ಸ್ಥಳ ಅಥವಾ ಮನೆ, ಕಚೇರಿ ಮುಂದೆ ಬೈಕ್ ನಿಲ್ಲಿಸೋಕು ಮುನ್ನ ಎಚ್ಚರ! ನಿಮ್ಮ ಬೈಕ್ಗಳ ಲಾಕ್ ಬ್ರೇಕ್ ಮಾಡಿ ಕಳ್ಳತನ ಮಾಡುವ ಚಾಲಾಕಿ ಕಳ್ಳರ ಗ್ಯಾಂಗ್ ನಗರದಲ್ಲಿದೆ.
2010ರಿಂದ ಬೈಕ್ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿರುವ ತಂಡವೊಂದು ಕದ್ದ ಬೈಕ್ಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವಲ್ಲಿ ನಿರತವಾಗಿದೆ. ಈ ಕುಖ್ಯಾತ ಕಳ್ಳರ ಗ್ಯಾಂಗ್ ಸೆರೆ ಹಿಡಿಯಲು ಸಿಸಿಬಿ ಪೊಲೀಸರು ಬೀಸಿದ ಬಲೆಗೆ ಶಿವಾಜಿನಗರದ ಸಯ್ಯದ್ ತಬ್ರೇಜ್ ಪಾಷಾ ಅಲಿಯಾಸ್ ಸಿತಾರಾ (40) ಎಂಬಾತ ಸಿಕ್ಕಿಬಿದ್ದಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಬಂಧಿತನಿಂದ 7 ಬೈಕ್ ಜಪ್ತಿ ಮಾಡಲಾಗಿದೆ.
ಕದ್ದ ಬೈಕ್ಗಳನ್ನು ಮಾಲೀಕರಿಗೆ ಗುರುತು ಸಿಗದಂತೆ ನೋಂದಣಿ ಸಂಖ್ಯೆ ಬದಲಾಯಿಸುತ್ತಿದ್ದರು. ಆ ನಂತರ ಇಂಜಿನ್ ಮತ್ತು ಚಾಸಿರ್ ನಂಬರ್ ಅನ್ನು ಟ್ಯಾಂಪರ್ ಮಾಡಿ ಅವುಗಳನ್ನು ಬದಲಾಯಿಸಿ ಬೇರೆ ಬೇರೆ ನಂಬರ್ ಹಾಕುತ್ತಿದ್ದರು. ಅದಕ್ಕೆ ತಕ್ಕಂತೆ ಆರ್.ಸಿ. ಬುಕ್ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರು.
ಇದಲ್ಲದೆ, ಕದ್ದ ವಾಹನಗಳ ಬಿಡಿ ಭಾಗಗಳನ್ನು ಬಿಚ್ಚಿ ಮಾರಾಟ ಮಾಡುತ್ತಿದ್ದರು. ಬೈಕ್ಗಳನ್ನು 10 ರಿಂದ 25 ಸಾವಿರ ರೂ. ವರೆಗೆ ಮಾರಾಟ ಮಾಡಿ ಬಂದ ಹಣದಲ್ಲಿ ಆರೋಪಿಗಳು ಹಂಚಿಕೊಳ್ಳುತ್ತಿದ್ದರು. ನಗರದ ಹಲವೆಡೆ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ತನಿಖೆ ನಡೆಸುವಂತೆ ರಾಜಾಜಿನಗರ ಠಾಣೆಗೆ ಪ್ರಕರಣ ವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಾದ ವೀಲರ್ ಷರೀಪ್ ಮತ್ತು ಕುಲ್ಮಿ ಮೌಲಾ ಎಂಬುವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Comments are closed.