ಕರ್ನಾಟಕ

ಕೊರೊನಾ ವೈರಸ್ ಸೋಂಕಿಗೆ ಮಹಿಳೆ ಸಾವು: 9 ಲಕ್ಷ ಕೊಡದೆ ಶವ ಕೊಡುವುದಿಲ್ಲವೆಂದ ಮಣಿಪಾಲ್‌ ಆಸ್ಪತ್ರೆ!

Pinterest LinkedIn Tumblr


ಬೆಂಗಳೂರು: ಕೊರೊನಾ ವೈರಸ್ ಸೋಂಕಿಗೆ ಹತ್ತು ದಿನಗಳಿಂದ ವೈಟ್‌ಫೀಲ್ಡ್‌ನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದು, ಶವ ನೀಡಲು 9.25 ಲಕ್ಷ ರೂ. ಶುಲ್ಕ ಕಟ್ಟುವಂತೆ ಬೇಡಿಕೆಯಿಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ. ಬಳಿಕ, ಬಿಬಿಎಂಪಿ ಆರೋಗ್ಯಾಧಿಕಾರಿಗಳು, ಆಸ್ಪತ್ರೆಯ ಆಡಳಿತ ಮಂಡಳಿ ಜತೆ ಮಾತನಾಡಿ ಕುಟುಂಬ ಸದಸ್ಯರಿಗೆ ಶವ ಹಸ್ತಾಂತರಿಸುವಲ್ಲಿ ಸಫಲರಾಗಿದ್ದಾರೆ.

ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಲು ಸರಕಾರ ಶುಲ್ಕ ನಿಗದಿಪಡಿಸಿದ್ದರೂ ಖಾಸಗಿ ಆಸ್ಪತ್ರೆಗಳು ಬೇಕಾಬಿಟ್ಟಿಯಾಗಿ ಶುಲ್ಕ ವಿಧಿಸುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ ‘ಕೆ.ಆರ್‌.ಪುರದ ವಿಜಿನಾಪುರದಲ್ಲಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಸುಮಾರು 50 ವರ್ಷದ ಮಹಿಳೆಯನ್ನು ಜು.13ರಂದು ವೈಟ್‌ಫೀಲ್ಡ್‌ನ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದ ದಿನವೇ ಹೃದಯಾಘಾತದಿಂದ ಅವರ ಪತಿ ನಿಧನರಾಗಿದ್ದರು. ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲೇ ಮಹಿಳೆಯ ಹಿರಿಯ ಪುತ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ . ಐಸಿಯು ಮತ್ತು ವೆಂಟಿಲೇಟರ್‌ನಲ್ಲಿದ್ದ ಮಹಿಳೆ, ಗುರುವಾರ ಬೆಳಗ್ಗೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಆದರೆ, ಶವ ನೀಡಲು ಆಸ್ಪತ್ರೆಯವರು 9.25 ಲಕ್ಷ ರೂ. ಬಿಲ್‌ ಕಟ್ಟಿ ಎಂದಿದ್ದಾರೆ,” ಎಂದು ಮೃತರ ಸಂಬಂಧಿ ಸುಲ್ತಾನ್‌ ಮಿರ್ಜಾ ತಿಳಿಸಿದರು.

”ಇತ್ತೀಚೆಗಷ್ಟೇ ಮನೆಯ ಮೂವರು ಹಿರಿಯರನ್ನೇ ಕಳೆದುಕೊಂಡ ಬಡ ಕುಟುಂಬದವರು ಶುಲ್ಕ ಕಟ್ಟಲು ಹಣ ಇಲ್ಲಎಂದಿದ್ದಾರೆ. ಆದರೆ, ಶುಲ್ಕ ಕಟ್ಟಿಯೇ ಶವ ತೆಗೆದುಕೊಂಡು ಹೋಗಿ ಎಂದು ಮಣಿಪಾಲ್‌ ಆಸ್ಪತ್ರೆಯವರು ಪಟ್ಟು ಹಿಡಿದಿದ್ದರು,”ಎಂದು ಮಿರ್ಜಾ ಆರೋಪಿಸಿದರು.

”ಮಹಿಳೆಗೆ ಆರೋಗ್ಯ ವಿಮೆ ಇದ್ದು, ಈ ವಿಚಾರವಾಗಿ ಕೆಲ ಗೊಂದಲಗಳು ಬಗೆಹರಿಯದ ಕಾರಣ ಶವ ಮರಳಿಸಲು ವಿಳಂಬವಾಗಿದೆ ಎಂದು ಆಸ್ಪತ್ರೆಯವರು ಮಾಹಿತಿ ನೀಡಿದ್ದಾರೆ,”’ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

Comments are closed.