ಕರ್ನಾಟಕ

10-12 ಜಿಲ್ಲೆಗಳಲ್ಲೂ ಲಾಕ್​ಡೌನ್​ಗೆ ಸರ್ಕಾರ ಗಂಭೀರ ಚಿಂತನೆ

Pinterest LinkedIn Tumblr


ಬೆಂಗಳೂರು(ಜುಲೈ 12): ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಕೈಮೀರಿ ವ್ಯಾಪಿಸುತ್ತಿರುವುದರಿಂದ ನಗರ ಹಾಗೂ ಗ್ರಾಮಾಂತರ ಎರಡೂ ಜಿಲ್ಲೆಗಳನ್ನ ಮಂಗಳವಾರದಿಂದ ಒಂದು ವಾರ ಕಾಲ ಕಟ್ಟುನಿಟ್ಟಾಗಿ ಲಾಕ್​ಡೌನ್ ಮಾಡಲು ನಿನ್ನೆ ಸರ್ಕಾರ ನಿರ್ಧರಿಸಿತ್ತು. ಆದರೆ, ಸರ್ಕಾರ ಇನ್ನೂ ಹಲವು ಜಿಲ್ಲೆಗಳನ್ನ ಲಾಕ್​ಡೌನ್ ಮಾಡಲು ಚಿತ್ತ ಹರಿಸಿದೆ. ಇವತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕಾವೇರಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಇತರ ಜಿಲ್ಲೆಗಳಲ್ಲೂ ಲಾಕ್​ಡೌನ್ ಮಾಡುವ ಬಗ್ಗೆ ಗಂಭೀರ ಚರ್ಚೆಯಾಗಿರುವುದು ತಿಳಿದುಬಂದಿದೆ. 10-12 ಜಿಲ್ಲೆಗಳಿಗೆ ದಿಗ್ಬಂಧನ ವಿಧಿಸುವ ಸಾಧ್ಯತೆ ಇದೆ. ಸಭೆಯಲ್ಲಿ ಪಾಲ್ಗೊಂಡಿದ್ದ ಕಂದಾಯ ಸಚಿವ ಆರ್ ಅಶೋಕ್ ಅವರು ಮಾಧ್ಯಮಗಳಿಗೆ ಇದರ ಸುಳಿವು ನೀಡಿದ್ದಾರೆ.

ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೊರೋನಾ ವೈರಸ್ ಸೋಂಕು ಬಹಳ ತೀವ್ರವಾಗಿರುವ ಇತರ ಜಿಲ್ಲೆಗಳ ಪರಿಸ್ಥಿತಿ ಬಗ್ಗೆ ಚರ್ಚೆಗಳಾಗಿವೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಸೇರಿ ಒಟ್ಟು 12 ಜಿಲ್ಲೆಗಳಲ್ಲಿ ಹೆಚ್ಚು ಗಂಭೀರತೆ ಇದೆ ಎಂದು ಪರಿಗಣಿಸಲಾಗಿದೆ. ಎರಡು ಹಂತದಲ್ಲಿ ಲಾಕ್​ಡೌನ್ ಮಾಡುವ ಬಗ್ಗೆ ನಾಳೆ ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.

ಲಾಕ್​ಡೌನ್ ಮಾಡಲು ಸಾಧ್ಯತೆ ಇರುವ ಜಿಲ್ಲೆಗಳು:
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಕಲಬುರ್ಗಿ, ಯಾದಗಿರಿ, ಬೀದರ್, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ವಿಜಯಪುರ, ಧಾರವಾಡ ಮತ್ತು ಮಂಡ್ಯ.

ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಇವತ್ತು ನಡೆದ ಸಭೆಯಲ್ಲಿ ಸಿಎಂ ಹಾಗೂ ಕಂದಾಯ ಸಚಿವರ ಜೊತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಲಾಕ್​ಡೌನ್ ಮಾರ್ಗಸೂಚಿಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ.

ಬೆಂಗಳೂರೊಂದನ್ನೇ ಲಾಕ್​ಡೌನ್ ಮಾಡುವುದಾ, ಅಥವಾ ಗಂಭೀರ ಪರಿಸ್ಥಿತಿ ಇರುವ 10-12 ಜಿಲ್ಲೆಗಳನ್ನ ಲಾಕ್​ಡೌನ್ ಮಾಡುವುದಾ ಅಥವಾ ಇಡೀ ರಾಜ್ಯವನ್ನೇ ಲಾಕ್​ಡೌನ್ ಮಾಡುವುದಾ ಎಂಬ ಸಂದಿಗ್ಧತೆಯಲ್ಲಿ ಸರ್ಕಾರ ಇದೆ. ನಾಳೆ ಸೋಮವಾರ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಸಿಎಂ ಅವರು ಎಲ್ಲಾ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.ಜಿಲ್ಲಾಧಿಕಾರಿಗಳೊಂದಿಗೆ ಎರಡು ಸಭೆಗಳು ನಾಳೆ ನಡೆಯಲಿವೆ. ಕೊರೋನಾ ಪ್ರಕರಣಗಳು ಗಂಭೀರವಾಗಿರುವ ಜಿಲ್ಲೆಗಳ ಡಿಸಿಗಳ ಜೊತೆ ಒಂದು ಸಭೆ ಹಾಗೂ ಗಂಭೀರವಲ್ಲದ ಜಿಲ್ಲೆಗಳ ಡಿಸಿಗಳ ಜೊತೆ ಇನ್ನೊಂದು ಸಭೆ ನಡೆಯಲಿದೆ ಎಂದು ಆರ್ ಅಶೋಕ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ಧಾರೆ.

ಜುಲೈ 14, ಮಂಗಳವಾರ ರಾತ್ರಿ 8ಗಂಟೆಯಿಂದ ಜುಲೈ 22ರವರೆಗೆ ಒಂದು ವಾರ ಕಾಲ ಲಾಕ್​ಡೌನ್ ಇರಲಿದೆ. ಈ ವೇಳೆ, ಮಾರ್ಗಸೂಚಿ ಏನೆಂಬುದು ನಾಳೆ ಸ್ಪಷ್ಟವಾಗಲಿದೆ. ಆರ್ ಅಶೋಕ್ ನೀಡಿರುವ ಸುಳಿವಿನ ಪ್ರಕಾರ ಔಷಧ ಕಾರ್ಖಾನೆಗಳು ಹಾಗೂ ವೆಂಟಿಲೇಟರ್ ಇತ್ಯಾಧಿ ಔಷಧೋಪಕರಣ ಉತ್ಪಾದಿಸುವ ಕೈಗಾರಿಕೆಗಳಿಗೆ ಲಾಕ್​ಡೌನ್ ಅನ್ವಯಿಸದೇ ಹೋಗುವ ಸಾಧ್ಯತೆ ಇದೆ.

ಅಧಿಕಾರಿಗಳ ಮೇಲೆ ಸಿಎಂ ಕೋಪ:

ರಾಜ್ಯದಲ್ಲಿ ಕೋವಿಡ್ ರೋಗಿಗಳಿಗೆ ಸರಿಯಾದ ವ್ಯವಸ್ಥೆ ಇಲ್ಲ ಎಂಬ ಗಂಭೀರ ಸ್ವರೂಪದ ದೂರುಗಳು ಕೇಳಿಬರುತ್ತಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಇವತ್ತಿನ ಸಭೆಯಲ್ಲಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ಧಾರೆ. ಆಂಬುಲೆನ್ಸ್​ಗಳನ್ನ ಖರೀದಿಸಲು ಸರ್ಕಾರ ಸೂಚನೆ ಕೊಟ್ಟಿದ್ದರೂ ಯಾಕೆ ಆಂಬುಲೆನ್ಸ್ ಸಮಸ್ಯೆ ಆಗುತ್ತಿದೆ? ಕೋವಿಡ್ ಪೇಷೆಂಟ್​ಗಳಿಗೆ ಇನ್ನೂ ಬೆಡ್ ಸಿಗುತ್ತಿಲ್ಲ ಎಂಬ ವರದಿಗಳು ಮಾಧ್ಯಮಗಳಲ್ಲಿ ಬರುತ್ತಿದೆ. ಹಾಗಾದರೆ ಖಾಸಗಿ ಆಸ್ಪತ್ರೆಗಳ ಬೆಡ್​ಗಳು ಎಲ್ಲಿ ಹೋದವು? ಬೆಡ್​ಗಳ ಕೇಂದ್ರೀಕೃತ ವ್ಯವಸ್ಥೆ ಆಗಲಿಲ್ಲವಾ ಎಂದು ಅಧಿಕಾರಿಗಳಿಗೆ ಸಿಎಂ ಪ್ರಶ್ನೆ ಮಾಡಿದ್ದಾರೆ.

ಮೆಡಿಕಲ್ ಉಪಕರಣ ಖರೀದಿಸುವ ಮುನ್ನ ಎಚ್ಚರವಹಿಸಿ. ದುಬಾರಿ ಬೆಲೆ ಕೊಟ್ಟು ಯಾಕೆ ಖರಿದಿ ಮಾಡುತ್ತಿದ್ದೀರಾ? ವಿರೋಧ ಪಕ್ಷಗಳು ಇದನ್ನೇ ಪ್ರಶ್ನೆ ಮಾಡುತ್ತಿರುವುದು. ಖರ್ಚು ಹೆಚ್ಚುತ್ತಿದೆಯೇ ಹೊರತು ಸಮಸ್ಯೆಗಳು ಕಡಿಮೆ ಆಗುತ್ತಿಲ್ಲ. ಎಲ್ಲಾ ಸಮಸ್ಯೆಗಳನ್ನ ಬಗೆಹರಿಸಿ ಎಂದು ಅಧಿಕಾರಿಗಳಿಗೆ ಸಿಎಂ ಬಿಎಸ್​ವೈ ತಾಕೀತು ಮಾಡಿದ್ಧಾರೆ.

Comments are closed.