ಕರ್ನಾಟಕ

ಕೊರೋನಾ ಸಂಬಂಧಿ ಔಷಧ ಕೊಟ್ಟಿರುವ ಮಾಹಿತಿ ನೀಡದ 70 ಮೆಡಿಕಲ್ ಸ್ಟೋರ್​ಗಳ ಪರವಾನಗಿ​ ರದ್ದು

Pinterest LinkedIn Tumblr


ಕಲಬುರ್ಗಿ(ಜು.07): ಕೊರೋನಾ ಹಾಟ್ ಸ್ಪಾಟ್ ಕಲಬುರ್ಗಿ ಜಿಲ್ಲೆಯಲ್ಲಿ ಸೋಂಕಿತರ ಜೊತೆ ಸಾವಿನ ಸಂಖ್ಯೆಯೂ ಹೆಚ್ಚಳವಾಗಿದೆ. ಮನೆಯಲ್ಲಿಯೇ ಔಷಧ ಸೇವಿಸಿ ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ಬರುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ರೋಗ ಲಕ್ಷಣ ಹೊಂದಿದವರಿಗೆ ಔಷಧ ನೀಡಿಕೆ ಬಗ್ಗೆ ಮಾಹಿತಿ ನೀಡದ ಕಲಬುರ್ಗಿ ಜಿಲ್ಲೆಯ 70 ಔಷಧ ಅಂಗಡಿಗಳ ಪರವಾನಗಿ(ಲೈಸೆನ್ಸ್​) ರದ್ದು ಮಾಡಲಾಗಿದೆ.

ಔಷಧ ಖರೀದಿಸಿದವರ ಮಾಹಿತಿ ನೀಡದ ಆರೋಪದ ಹಿನ್ನೆಲೆಯಲ್ಲಿ ಅನಿರ್ಧಿಷ್ಟಾವಧಿವರೆಗೆ ಲೈಸೆನ್ಸ್​ ರದ್ದು ಮಾಡಲಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ರೋಗ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ, ILI/SARI ಹೊಂದಿದವರಿಂದ ನೇರವಾಗಿ ಔಷಧ ಖರೀದಿ ನಡೆದಿದೆ. ಹೀಗೆ ರೋಗ ಲಕ್ಷಣ ಹೊಂದಿ ಔಷಧ ಖರೀದಿಸಿದವರ ಮಾಹಿತಿ ನೀಡುವಲ್ಲಿ ಕೆಲ ಔಷಧ ಅಂಗಡಿಗಳು ವಿಫಲವಾಗಿವೆ.

ಖರೀದಿದಾರರ ವಿವರವನ್ನು ಫಾರಂ ಪೋರ್ಟ್ ನಲ್ಲಿ ಭರ್ತಿ ಮಾಡದೆ ಅಂಗಡಿಗಳು ನಿರ್ಲಕ್ಷ್ಯ ವಹಿಸಿ, ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿವೆ. ಕೋವಿಡ್ -19 ರೆಗ್ಯುಲೇಷನ್ ಕಾಯ್ದೆಯ ಉಲ್ಲಂಘನೆ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 70 ಔಷಧ ಅಂಗಡಿಗಳ ಪರವಾನಗಿಯನ್ನು ಅನಿರ್ಧಿಷ್ಟಾವಧಿಗೆ ರದ್ದುಗೊಳಿಸಿ ಅಪರ ಔಷಧ ನಿಯಂತ್ರಕ ಅಮರೇಶ್ ತುಂಬಗಿ ಆದೇಶ ಹೊರಡಿಸಿದ್ದಾರೆ.

ದೇಶದಲ್ಲಿಯೇ ಮೊದಲ ಕೊರೋನಾ ಸಾವಿಗೆ ಸಾಕ್ಷಿಯಾಗಿದ್ದ ಕಲಬುರ್ಗಿ ಜಿಲ್ಲೆಯಲ್ಲಿ, ರಾಜ್ಯದಲ್ಲಿಯೇ ಅತಿ ಹೆಚ್ಚು ಔಷಧ ಅಂಗಡಿಗಳ ಪರವಾನಗಿ ರದ್ದುಗೊಂಡಿವೆ. ಜಿಲ್ಲೆಯಲ್ಲಿ ಕೊರೋನಾ ವ್ಯಾಪಕ ಹಿನ್ನೆಲೆಯಲ್ಲಿ ಕೆಲವರು ಮನೆಯಲ್ಲಿಯೇ ಮಾತ್ರೆ ತೆಗೆದುಕೊಂಡು, ಗಂಭೀರ ಸ್ವರೂಪ ಪಡೆದುಕೊಂಡ ನಂತರ ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ.

ಇದರಿಂದಾಗಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯಲ್ಲಿಯೂ ದಿಢೀರ್ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮಾಹಿತಿ ನೀಡದೇ ನಿರ್ಲಕ್ಷ್ಯ ತೋರಿದ ಅಂಗಡಿಗಳ ಲೈಸೆನ್ಸ್​ ರದ್ದು ಮಾಡಲಾಗಿದೆ.

Comments are closed.