ಕರ್ನಾಟಕ

ಸದ್ಯ ಸರಕಾರದ ಮುಂದೆ ಲಾಕ್‌ಡೌನ್‌ ಪ್ರಸ್ತಾಪ ಇಲ್ಲ: ಡಿಸಿಎಂ ಗೋವಿಂದ ಕಾರಜೋಳ

Pinterest LinkedIn Tumblr


ಬಾಗಲಕೋಟೆ: ರಾಜ್ಯ ಸರಕಾರದ ಮುಂದೆ ಸದ್ಯಕ್ಕೆ ಲಾಕ್‌ಡೌನ್‌ ಜಾರಿಗೊಳಿಸುವ ಪ್ರಸ್ತಾಪ ಇಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪರಿಸ್ಥಿತಿ ಭೀಕರವಾಗುತ್ತಿದೆ. ಆದರೆ, ರಾಜ್ಯ ಸರಕಾರದ ಮುಂದೆ ಲಾಕ್‌ಡೌನ್‌ ನಿರ್ಧಾರ ಇಲ್ಲ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆ ಜೊತೆ ಇನ್ನೂ ಅನೇಕ ಸಮಸ್ಯೆಗಳಿವೆ. ಆದ್ದರಿಂದ ಲಾಕ್‌ಡೌನ್‌ ಬಗ್ಗೆ ಇನ್ನೂ ನಿರ್ಧಾರ ಮಾಡಲಾಗಿಲ್ಲ. ರಾಜ್ಯದಲ್ಲಿ ಸೋಮವಾರದಿಂದ ರಾತ್ರಿ 8 ರಿಂದ ಬೆಳಗ್ಗೆ 5 ವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ರಸ್ತೆಬದಿ ತಿಂಡಿ ತಿನಿಸು ವ್ಯಾಪಾರದಿಂದ ಅಪಾಯ ಕಂಡು ಬಂದ ಹಿನ್ನೆಲೆ, ಜಿಲ್ಲೆಯಲ್ಲಿ ಮಂಗಳವಾರದಿಂದ ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ಜಾರಿಗೆ ನಿರ್ಧರಿಸಲಾಗಿದೆ. ಕರ್ಫ್ಯೂ ಕಟ್ಟುನಿಟ್ಟು ಜಾರಿಗೆ ತರಲು ತಾಲೂಕುವಾರು ಫ್ಲೈಯಿಂಗ್ ಸ್ಕ್ವಾಡ್ ತಂಡ ನಿಯೋಜನೆ ಮಾಡಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸ್ಕ್ವಾಡ್ ಗೆ ಅಧಿಕಾರ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ ಎನ್ನುವ ಪ್ರಶ್ನೆಗೆ ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯಿಸಲು ನಕಾರ ವ್ಯಕ್ತಪಡಿಸಿದರು. ಇನ್ನು, ಜಿಲ್ಲೆಯಲ್ಲಿ ಸೋಮವಾರ ಕಂಡುಬಂದಿರುವ 4 ಹೊಸ ಪಾಸಿಟಿವ್‌ ಕೇಸ್ ಸೇರಿ ಸೋಂಕಿತರ ಸಂಖ್ಯೆ 184ಕ್ಕೆ ಏರಿದೆ. ಇದುವರೆಗೂ 5 ಜನ ಸಾವನ್ನಪ್ಪಿದ್ದಾರೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಿಬ್ಬಂದಿ ಕೊರೊನಾ ತಡೆಗೆ ಶ್ರಮವಹಿಸುತ್ತಿದ್ದಾರೆ. ಆದರೆ, ಜನ ಸುರಕ್ಷಿತ ನಿಯಮ ಪಾಲಿಸುತ್ತಿಲ್ಲ ಎಂದು ಕಾರಜೋಳ ಬೇಸರ ವ್ಯಕ್ತಪಡಿಸಿದರು.

Comments are closed.