ಕರ್ನಾಟಕ

ಕಳ್ಳನಿಗೆ ಕೊರೊನಾ, ಶಿರಸಿ ನಗರ ಪೊಲೀಸ್‌ ಠಾಣೆ ಸೀಲ್‌ಡೌನ್‌

Pinterest LinkedIn Tumblr


ಉತ್ತರ ಕನ್ನಡ: ಶಿರಸಿಯ ನಗರ ಪೊಲೀಸರು ಬಂಧಿಸಿದ್ದ ಬೈಕ್‌ ಕಳ್ಳತನದ ಆರೋಪಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಹಿನ್ನೆಲೆ ನಗರ ಪೊಲೀಸ್‌ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. ನಾಲ್ಕು ದಿನಗಳ ಹಿಂದೆ ಆರೋಪಿಯನ್ನು ಹುಬ್ಬಳ್ಳಿಯಿಂದ ಪೊಲೀಸರು ಕರೆತಂದಿದ್ದರು.

ಧಾರವಾಡ ಮೂಲದ ಆರೋಪಿ ವಿವಿಧೆಡೆ ಬೈಕ್ ಕಳ್ಳತನ ಮಾಡಿದ್ದು ತನಿಖೆಯಲ್ಲಿ ಬಹಿರಂಗವಾಗಿತ್ತು. ಆತನನ್ನು ಬಂಧಿಸಿ ಸ್ಥಳೀಯ ಉಪ ಜೈಲಿನಲ್ಲಿ ಇಡಲಾಗಿತ್ತು. ಮೊದಲ
ಕೊರೊನಾ ವೈರಸ್‌ ತಪಾಸಣೆಯಲ್ಲಿ ನೆಗೆಟಿವ್ ಇದ್ದರೂ, ಎರಡನೇ ತಪಾಸಣಾ ವರದಿಯಲ್ಲಿ ಪಾಸಿಟಿವ್ ಬಂದಿದೆ.

ಆರೋಪಿಗೆ ಕೊರೊನಾ ದೃಢವಾಗಿರುವುದು ಪೊಲೀಸ್ ಇಲಾಖಾ ವಲಯದಲ್ಲಿ ತಬ್ಬಿಬ್ಬುಗೊಳಿಸಿದೆ. ಈಗ ನಗರ ಪೊಲೀಸ್ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಕಳ್ಳತನದ ಆರೋಪಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿಯ ಸಂಪರ್ಕಕ್ಕೆ ಬಂದ ಪಿಎಸ್ಐ ಸೇರಿ ಪೊಲೀಸ್‌ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ.

ಇವರೆಲ್ಲರ ಗಂಟಲು ದ್ರವ ಸಂಗ್ರಹಿಸಿ ಕಳುಹಿಸಲಾಗುತ್ತಿದೆ. ಪೊಲೀಸ್‌ ಠಾಣೆಯನ್ನು, ಸಿಪಿಐ ಹಾಗೂ ಡಿಎಸ್‌ಪಿ ಕಚೇರಿಯನ್ನು ಸ್ಯಾನಿಟೈಸ್‌ ಮಾಡಲಾಗಿದೆ. ನ್ಯಾಯಾಲಯ ಹಾಗೂ ಜೈಲನ್ನು ಕೂಡ ಸ್ಯಾನಿಟೈಸ್‌ ಮಾಡಲಾಗಿದೆ.

Comments are closed.