ಹುಬ್ಬಳ್ಳಿ (ಜೂನ್ 10); ಕೆಲ ದಿನಗಳ ಹಿಂದೆ ಪಾಕಿಸ್ತಾನದ ಪರ ಘೋಷಣೆ ಕೂಗುವ ಮೂಲಕ ಇಡೀ ದೇಶಾದ್ಯಂತ ಸಂಚಲನ ಮೂಡಿಸಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಇಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಫೆಬ್ರುವರಿ 15ರಂದು ಬಂಧಿತರಾಗಿದ್ದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಧಾರವಾಡ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಿದೆ.
ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಶ್ಮೀರ ಮೂಲದ ತಾಲಿಬ್ ಮಾಜಿದ್, ಆಮಿರ್ ವಾನಿ ಮತ್ತು ಬಾಷಿತ್ ಸೋಫಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮೂವರನ್ನು ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಿದ್ದ ಗೋಕುಲ ರಸ್ತೆ ಠಾಣೆ ಪೊಲೀಸರು ಜೈಲಿಗಟ್ಟಿದ್ದರು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಸಂದರ್ಭದಲ್ಲಿ ಭಜರಂಗ ದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಅಲ್ಲದೆ, ಕಲ್ಲು ತೂರಾಟ ನಡೆಯುವ ಮೂಲಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಮೂವರು ಕಾಶ್ಮೀರಿಗಳನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇಂದು ಜಾಮೀನು ಮಂಜೂರಾಗುತ್ತಿದ್ದಂತೆ ಕಾಶ್ಮೀರಿಗಳನ್ನು ಜೈಲಿಂದ ಬಿಡುಗಡೆ ಮಾಡಲಾಗಿದ್ದು ಪೊಲೀಸರು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಪೊಲೀಸರು ಕಸ್ಟಡಿಗೆ ಕೊಡುವಂತೆ ಕೋರ್ಟ್ ಮೊರೆ ಹೋಗಿದ್ದರು. ಹುಬ್ಬಳ್ಳಿಯ ಎರಡನೆಯ ಜೆಎಮ್‌ಎಫ್‌ಸಿ ನ್ಯಾಯಾಲಯ ಫೆಬ್ರುವರಿ 25 ರಂದು ಪೊಲೀಸ್ ಕಸ್ಟಡಿಗೆ ಅನುಮತಿ ನೀಡಿತ್ತು. ಆಮೀರ್, ಬಾಸಿತ್, ತಾಲೀಬ್‌ರನ್ನು ವಶಕ್ಕೆ ಪಡೆದಿದ್ದ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ನಡೆಸಿದ್ದರು. ಮೂವರು ಆರೋಪಿಗಳನ್ನು ಫೆಬ್ರುವರಿ 28ರವರೆಗೆ ಪೊಲೀಸ್‌ರು ವಿಚಾರಣೆ ಮಾಡಿದ್ದರು.
Comments are closed.