ಕರ್ನಾಟಕ

ರಾಜ್ಯದಲ್ಲಿ ಒಂದೇ ದಿನ 149 ಹೊಸ ಕೊರೊನಾ ಸೋಂಕು! ಮಂಡ್ಯ 71‌!

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಆಮೆಗತಿಯಲ್ಲಿ ಸಾಗುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಯಿಂದ ಮಿಂಚಿನ ಓಟ ಆರಂಭಿಸಿದೆ. ಸೋಮವಾರ ರಾಜ್ಯದಲ್ಲಿ 99 ಜನರಿಗೆ ಸೋಂಕು ತಗುಲಿದ್ದರೆ, ಇಂದು ಮಂಗಳವಾರ ರಾಜ್ಯದ್ಯಂತ 149 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಆರೋಗ್ಯ ಇಲಾಖೆಯ ಮಂಗಳವಾರದ ಬೆಳಗಿನ ಹೆಲ್ತ್‌ ಬುಲೆಟಿನ್‌ನಲ್ಲಿ 127 ಪ್ರಕರಣಗಳು ವರದಿಯಾಗಿದ್ದವು. ಸಂಜೆಯ ಹೆಲ್ತ್‌ ಬುಲೆಟಿನ್‌ನಲ್ಲಿ ಮತ್ತೆ 22 ಕೊರೊನಾ ಕೇಸ್‌ ಪತ್ತೆಯಾಗಿವೆ. ರಾಜ್ಯದಲ್ಲಿ ಮಂಗಳವಾರ ಒಂದೇ ದಿನ ಒಟ್ಟು 149 ಹೊಸ ಕೊರೊನಾ ಪ್ರಕರಣಗಳು ದೃಢವಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1395ಕ್ಕೆ ಏರಿಕೆಯಾದಂತಾಗಿದೆ. ಇದುವೆರೆಗೆ ರಾಜ್ಯದಲ್ಲಿ ಕೊರೊನಾ ವೈರಸ್‌ಗೆ ಒಟ್ಟು 40 ಮಂದಿ ಬಲಿಯಾಗಿದ್ದಾರೆ.

ಇದುವರೆಗೆ 543 ಮಂದಿ ಪೂರ್ಣವಾಗಿ ಗುಣವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. 811 ಮಂದಿಯಲ್ಲಿ ಕೊರೊನಾ ವೈರಸ್‌ ಸಕ್ರಿಯವಾಗಿದೆ. ಒಟ್ಟು 6 ಮಂದಿ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಡ್ಯದಲ್ಲಿ ಮಂಗಳವಾರ ಒಂದೇ ದಿನ 71 ಮಂದಿಗೆ ಕೊರೊನಾ ಪ್ರಕರಣ ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಒಟ್ಟು 6 ಹೊಸ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ ಪಾದರಾಯನಪುರ ಪುಂಡನಿಂದಲೇ ಮೂವರಿಗೆ ಸೋಂಕು ತಗುಲಿದೆ.

ಉಳಿದಂತೆ ದಾವಣಗೆರೆ 22, ಕಲಬುರಗಿ 13, ಶಿವಮೊಗ್ಗ 10, ಬೆಂಗಳೂರು 6, ಚಿಕ್ಕಮಗಳೂರು 5, ಉಡುಪಿ 4, ಉತ್ತರ ಕನ್ನಡದಲ್ಲಿ 4, ವಿಜಯಪುರ, ಬೀದರ್, ಗದಗ, ಯಾದಗಿರಿ, ಚಿತ್ರದುರ್ಗ, ರಾಯಚೂರಿನಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.

ರಾಜ್ಯಕ್ಕೆ ಕುತ್ತು ತಂದ ಮುಂಬೈ ನಂಜು
ಮಂಗಳವಾರ ದೃಢಪಟ್ಟಿರುವ 149 ಪ್ರಕರಣಗಳಲ್ಲಿ ಬಹುತೇಕ ಮಂದಿ ಮಂಬೈನಿಂದ ಆಗಮಿಸಿದವರೇ ಇದ್ದಾರೆ. ಮಂಡ್ಯದಲ್ಲಿ ಇಂದು ಪತ್ತೆಯಾದ 71 ಪ್ರಕರಣಗಳಲ್ಲೂ ಮಂಬೈನಿಂದ ಬಂದವರೇ ಹೆಚ್ಚಿದ್ದಾರೆ. ಈ ಮೂಲಕ ಮುಂಬೈನಿಂದ ವಾಪಸ್‌ ಬಂದವರಲ್ಲಿ ಕೊರೊನಾ ಪತ್ತೆಯಾಗುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ.

Comments are closed.