ಕರ್ನಾಟಕ

ತುಮಕೂರಿನಲ್ಲಿ ಸೀಲ್ ಡೌನ್ ವೇಳೆ ವ್ಯಕ್ತಿಯೊಬ್ಬರ ಸಾವು; ಹಿಂದೂ ಕುಟುಂಬದ ನೆರವಿಗೆ ಬಂದು ಅಂತ್ಯಕ್ರಿಯೆ ನಡೆಸಿದ ಮುಸ್ಲಿಂ ಯುವಕರು

Pinterest LinkedIn Tumblr

ತುಮಕೂರು: ಇಲ್ಲಿನ ಸೀಲ್ ಆದ ವಲಯ-2ರಲ್ಲಿ ಕಳೆದ ಮಂಗಳವಾರ ಬೆಳ್ಳಂಬೆಳಗ್ಗೆ 60 ವರ್ಷದ ಹೆಚ್ ಎಸ್ ನಾರಾಯಣ ರಾವ್ ಹಠಾತ್ತಾಗಿ ಮೃತಪಟ್ಟರು. ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಹೊಂದಿರುವ ನಾರಾಯಣ ರಾವ್ ಕುಟುಂಬಕ್ಕೆ ಈ ಸಮಯದಲ್ಲಿ ಏನು ಮಾಡಬೇಕೆಂದೇ ದಿಕ್ಕು ತೋಚದಾಯಿತು. ಆರ್ಥಿಕವಾಗಿ ಬಡ ಕುಟುಂಬ ಬೇರೆ.

ಆ ಸಂದರ್ಭದಲ್ಲಿ ಅವರ ನೆರವಿಗೆ ಬಂದಿದ್ದು ಮುಸ್ಲಿಮ್ ಯುವಕರ ಗುಂಪು. 5 ಸಾವಿರ ರೂಪಾಯಿ ಸಂಗ್ರಹಿಸಿ ನಾರಾಯಣ ರಾವ್ ಪತ್ನಿ, ಮಕ್ಕಳಲ್ಲಿ ಧೈರ್ಯ ತುಂಬಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿದರು.

ಸೀಲ್ ಡೌನ್ ಆಗಿದ್ದರಿಂದ ನಾರಾಯಣ ರಾವ್ ಸಂಬಂಧಿಕರು ಯಾರೂ ಅವರ ಮನೆಗೆ ಹೋಗುವಂತಿರಲಿಲ್ಲ. ಆಗ ಈ ಮುಸ್ಲಿಂ ಯುವಕರೇ ಹೊಣೆ ಹೊತ್ತುಕೊಂಡು ಮಾಡಬೇಕಾದ ಕೆಲಸಗಳನ್ನು ಮಾಡಿದರು. ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ವಸ್ತುಗಳನ್ನು ತರುವ ವ್ಯವಸ್ಥೆ ಮಾಡಿದರು. ಅದಕ್ಕೆ ಪ್ರದೇಶದ ಕಾರ್ಪೊರೇಟರ್ ನಯಾಝ್ ಅಹ್ಮದ್ ಸಹಾಯ ಮಾಡಿದರು.

ನಾರಾಯಣ್ ರಾವ್ ಅವರು ಕಂಟೈನ್ ಮೆಂಟ್ ಪ್ರದೇಶದಲ್ಲಿ ವಾಸಿಸುತ್ತಿದ್ದರಿಂದ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಕೊರೋನಾ ಪರೀಕ್ಷೆಗೆ ಕಳುಹಿಸಲಾಯಿತು, ಅದರಲ್ಲಿ ನೆಗೆಟಿವ್ ಬಂದಿದೆ.

Comments are closed.