ಕರ್ನಾಟಕ

ನಿಖಿಲ್‌-ರೇವತಿ ಮದುವೆ: ಕೊರೊನಾ ಲಾಕ್‌ಡೌನ್‌ ಮಾರ್ಗಸೂಚಿ ಉಲ್ಲಂಘನೆ ಆರೋಪ

Pinterest LinkedIn Tumblr


ರಾಮನಗರ: ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೊರೊನಾ ಲಾಕ್‌ಡೌನ್‌ ನಡುವೆಯೂ ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಮದುವೆ ನೆರವೇರಿತು. ಆದರೆ ಮದುವೆ ಸಮಾರಂಭದಲ್ಲಿ ಕೊರೊನಾ ಲಾಕ್‌ಡೌನ್ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿರುವ ಆರೋಪ ಕೇಳಿಬರುತ್ತಿದೆ. ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗುತ್ತಿದೆ.

ಕೊರೊನಾ ಲಾಕ್‌ಡೌನ್‌ ನಡುವೆ ನಿಖಲ್ ಹಾಗೂ ರೇವತಿ ಮದುವೆ ಮುಂದೂಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ನಿಗದಿತ ದಿನದಂದು ಮದುವೆ ನಡೆದಿದೆ. ಕೊರೊನಾ ಲಾಕ್‌ಡೌನ್‌ ಕಾರಣದಿಂದಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಮದುವೆಯಲ್ಲಿ ಕೇವಲ 20 ಜನರು ಭಾಗಿಯಾಗಲು ಅವಕಾಶವಿದೆ. ಹೀಗಿದ್ದರೂ ನಿಖಿಲ್- ರೇವತಿ ಮದುವೆ ಸಮಾರಂಭದಲ್ಲಿ ಸುಮಾರು 150, 200 ಜನರು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಅಷ್ಟೇ ಅಲ್ಲದೆ ಮದುವೆ ಸಮಾರಂಭದ ಫೋಟೋಗಳಲ್ಲಿ ಕಾಣಿಸಿಕೊಂಡವರು ಮಾಸ್ಕ್‌ ಧರಿಸಿಲ್ಲ. ಕನಿಷ್ಟ ಸಾಮಾಜಿಕ ಅಂತರವನ್ನೂ ಪಾಲನೆ ಮಾಡಿಲ್ಲ. ಮದುವೆ ಕಾರ್ಯಕ್ರಮಕ್ಕೆ ಸುಮಾರು 48 ವಾಹನಗಳನ್ನು ಬಳಸಲಾಗಿದೆ. ಇವೆಲ್ಲವೂ ವಿಪತ್ತು ನಿರ್ವಹಣಾ ಕಾಯ್ದೆ 2005 ಅನ್ವಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ.

ರಾಮನಗರ ಜಿಲ್ಲಾ ಬಿಜೆಪಿ ಮುಖಂಡರು ಇದನ್ನು ವಿರೋಧಿಸಿದ್ದಾರೆ. ಮಾಜಿ ಸಿಎಂ ಆಗಿರುವ ಕುಮಾರಸ್ವಾಮಿಯವರು ಕೊರೊನಾದಂತಹ ಸಂದರ್ಭದಲ್ಲಿ ಕಾನೂನು ಪಾಲನೆ ಮಾಡುವ ಮೂಲಕ ಮಾದರಿಯಾಗಬೇಕಿತ್ತು. ಆದರೆ ಅದನ್ನು ಉಲ್ಲಂಘನೆ ಮಾಡಿರುವುದು ಸರಿಯಲ್ಲ ಎಂದು ಆರೋಪಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮದುವೆ ಸಮಾರಂಭದಲ್ಲಿ ಯಾವುದೇ ಕಾನೂನಿನ ಉಲ್ಲಂಘನೆಯಾಗಿಲ್ಲ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲಾಗಿದೆ ಎಂದು ಜೆಡಿಎಸ್‌ ಮುಖಂಡ ಎನ್‌.ಎಚ್ ಕೋನರೆಡ್ಡಿ ಸಮರ್ಥಿಸಿಕೊಂಡಿದ್ದಾರೆ. ಮದುವೆಯಲ್ಲಿ ಸಾಕಷ್ಟು ಜನರು ಸೇರುವ ಪ್ಲಾನ್‌ ಇತ್ತು, ಆದರೆ ಕೆಲವೇ ಜನರಷ್ಟೇ ಸೇರಿದ್ದಾರೆ. ಧಾರ್ಮಿಕ ಕಾರ್ಯಕ್ರಮ ಸಂದರ್ಭದಲ್ಲಿ ಮಾಸ್ಕ್ ಹಾಕಿಲ್ಲ. ಆದರೆ ಬೇರೆ ಸಂದರ್ಭದಲ್ಲಿ ಮಾಸ್ಕ್‌ ಧರಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ವಿವಾಹದಲ್ಲಿ ಲಾಕ್‌ಡೌನ್‌ ನಿಯಮಗಳು ಉಲ್ಲಂಘಿಸಿದ್ದರೆ ಖಂಡಿತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲದಿದ್ದರೆ ಇಡೀ ವ್ಯವಸ್ಥೆಯನ್ನೇ ಅಪಹಾಸ್ಯಕ್ಕೀಡು ಮಾಡಿದಂತಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದ್ದಾರೆ.

Comments are closed.