ಕರ್ನಾಟಕ

ಪೊಲೀಸರ ತಂತ್ರದಿಂದ ಕೊನೆಗೂ ಬೆಂಗಳೂರಿನ ಶಿವಾಜಿನಗರ ಲಾಕ್​ಡೌನ್!

Pinterest LinkedIn Tumblr


ಬೆಂಗಳೂರು (ಏ. 8): 21 ದಿನಗಳ ಕಾಲ ಲಾಕ್​ಡೌನ್​ಗೆ ಕರೆನೀಡಿರುವ ಕೇಂದ್ರ ಸರ್ಕಾರದ ಆದೇಶದಂತೆ ಕರ್ನಾಟಕದಲ್ಲೂ ಲಾಕ್​ಡೌನ್​ ಘೋಷಿಸಲಾಗಿತ್ತು. ಆದರೆ, ಬೆಂಗಳೂರಿನ ಶಿವಾಜಿನಗರದಲ್ಲಿ ಮಾತ್ರ ಜನಜಂಗುಳಿಯನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಲಾಕ್​ಡೌನ್​ಗೆ ಕಿಮ್ಮತ್ತಿನ ಬೆಲೆಯೂ ನೀಡದೆ ಜನರು ಓಡಾಡುತ್ತಿದ್ದರು. ಕೊನೆಗೂ ಈ ಶಿವಾಜಿನಗರವನ್ನು ಲಾಕ್​ಡೌನ್ ಮಾಡುವಲ್ಲಿ ಈಗ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಮೂಲಕ ಪೊಲೀಸರು ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಶಿವಾಜಿನಗರದ ಚಿತ್ರಣವನ್ನೇ ಬದಲಿಸಿದ್ದಾರೆ. ಶಿವಾಜಿನಗರವನ್ನು ಇಂದಿನಿಂದ ಸಂಪೂರ್ಣವಾಗಿ ಲಾಕ್​ಡೌನ್ ಮಾಡಲಾಗಿದೆ. ಇಡೀ ಬೆಂಗಳೂರೇ ಲಾಕ್​ಡೌನ್ ಆಗಿದ್ದರೂ ಶಿವಾಜಿನಗರದ ಜನ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಇಲ್ಲಿ ಹಗಲು-ರಾತ್ರಿ ಜನ ಸಂಚಾರ ನಡೆದೇ ಇತ್ತು. ಸುರಕ್ಷತಾ ದೃಷ್ಟಿಯಿಂದ ಮನೆಯೊಳಗೆ ಇರುವಂತೆ ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸರು ಹೇಳಿದರೂ ಆ ಬಗ್ಗೆ ಇಲ್ಲಿನ ಜನ ತಲೆಕೆಡಿಸಿಕೊಂಡಿರಲಿಲ್ಲ.

ಹೀಗಾಗಿ, ಮೂರು ದಿನಗಳ ಹಿಂದಷ್ಟೇ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮತ್ತು ಡಿಸಿಪಿ ಶರಣಪ್ಪ ಮುಸ್ಲಿಂ ಧರ್ಮಗುರುಗಳ ಜೊತೆ ಸಭೆ ನಡೆಸಿದ್ದರು. ಲಾಕ್​ಡೌನ್ ನಿಯಮ ಪಾಲಿಸುವಂತೆ ಜನರಿಗೆ ಕರೆ ಕೊಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಧರ್ಮಗುರುಗಳು ತಮ್ಮ ಸಮುದಾಯದ ಜನರಿಗೆ ಹೇಳಿದ ನಂತರ ನಿನ್ನೆಯಿಂದ ಶಿವಾಜಿನಗರ ಸಂಪೂರ್ಣ ಲಾಕ್​ಡೌನ್ ಆಗಿದೆ. ಜನರಿಂದ ತುಂಬಿರುತ್ತಿದ್ದ ಶಿವಾಜಿನಗರ ಈಗ ಹೇಗಾಗಿದೆ ಎಂಬುದರ ಡ್ರೋನ್ ಕ್ಯಾಮೆರಾದ ವಿಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

Comments are closed.