ಕರ್ನಾಟಕ

ಕೊರೋನಾಗೆ ರಾಜ್ಯದಲ್ಲಿ 4ಕ್ಕೇರಿದ ಸಾವಿನ ಸಂಖ್ಯೆ

Pinterest LinkedIn Tumblr


ಬಾಗಲಕೋಟೆ(ಏ.04): ಮಾರಣಾಂತಿಕ ಕೊರೋನಾ ವೈರಸ್​ಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ನಿನ್ನೆ ತಡರಾತ್ರಿ ಬಾಗಲಕೋಟೆಯಲ್ಲಿ 75 ವರ್ಷದ ವೃದ್ಧ ಕೊರೋನಾ ವೈರಸ್​​ನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಮೃತ ವೃದ್ಧ ಯಾವುದೇ ವಿದೇಶ ಪ್ರಯಾಣ ಮಾಡಿರವ ಇತಿಹಾಸ ಹೊಂದಿಲ್ಲ ಎಂದು ತಿಳಿದು ಬಂದಿದೆ. ಜೊತೆಗೆ ಈ ವ್ಯಕ್ತಿ ದೆಹಲಿಯ ತಬ್ಲಿಘೀ -ಇ-ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲೂ ಸಹ ಭಾಗವಹಿಸಿರಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಿನ್ನೆ ಆರೋಗ್ಯಾಧಿಕಾರಿಗಳು ವೃದ್ಧನ ಕುಟುಂಬಸ್ಥರನ್ನು ಪರೀಕ್ಷೆಗೊಳಪಡಿಸಿದ್ದರು. ಬೆಂಗಳೂರಿನಲ್ಲಿ ಬಂದಿದ್ದ ಮಗನಿಂದಲೇ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಮಗನ ವರದಿಯೂ ನೆಗೆಟಿವ್​ ಬಂದಿರುವ ಹಿನ್ನೆಲೆ, ವೃದ್ಧನಿಗೆ ಸೋಂಕು ಹೇಗೆ ಹರಡಿತ್ತು ಎಂಬುದೇ ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಿದೆ.

ಮೊನ್ನೆ ವೃದ್ಧನ ಮಗ ಸೇರಿ ಐದು ಜನರ ಗಂಟಲು ದ್ರವ ಮತ್ತು ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ನಿನ್ನೆ ಸಂಜೆ ವೃದ್ಧನ ಮಗ, ಮಗಳು, ವೃದ್ಧನ ಸಹೋದರನ ಮಗನ ವರದಿ ಜಿಲ್ಲಾಡಳಿತಕ್ಕೆ ಬಂದಿದೆ. ಐದು ವರದಿ ಪೈಕಿ ಮೂವರದು ನೆಗೆಟಿವ್ ಇದೆ. ಇನ್ನಿಬ್ಬರದು ವರದಿ ಬರುವುದು ಬಾಕಿ ಇದೆ. ಮೃತ ವೃದ್ಧನ ಮಗ, ಮಗಳು, ಸಹೋದರನ ಮಗನ ವರದಿ ನೆಗಟಿವ್ ಬಂದಿದೆ. ವೃದ್ಧನ ಹೆಂಡತಿ,ಸಹೋದರನ ವರದಿ ಬರುವುದು ಬಾಕಿ ಇದೆ.

ಕೊರೋನಾ ವೈರಸ್ ಆರ್ಭಟ; ಕಳೆದ 24 ಗಂಟೆಯಲ್ಲಿ 478 ಪ್ರಕರಣ ದಾಖಲು, ಸಾವಿನ ಸಂಖ್ಯೆ 62ಕ್ಕೆ ಏರಿಕೆ

ಮೃತ ವೃದ್ಧ ಬಾಗಲಕೋಟೆಯಲ್ಲಿ ಕಿರಾಣಿ ವರ್ತಕನಾಗಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ ಅಂಗಡಿ, ಮನೆಗೆ ಬಂದು ಹೋಗಿರುವವರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಇನ್ನು, ಬಾಗಲಕೋಟೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 175 ಜನರ ಮೇಲೆ ನಿಗಾ ಇಡಲಾಗಿದೆ. 154 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ.

ಸೋಂಕಿತ ವೃದ್ಧನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 5 ಜನ ಆಸ್ಪತ್ರೆ ಐಸೋಲೇಷನ್ ವಾರ್ಡ್ ಗೆ ದಾಖಲಾಗಿದ್ದಾರೆ. ಆಸ್ಪತ್ರೆ ಐಸೋಲೇಷನ್ ವಾರ್ಡ್​​​​ನಲ್ಲಿರುವವರ ಸಂಖ್ಯೆ 21. 14 ದಿನಗಳ ನಿಗಾ ಅವಧಿ ಪೂರೈಸಿದವರ ಸಂಖ್ಯೆ 156 ಹಾಗೂ 28 ದಿನ ಹೋಂ ಕ್ವಾರಂಟೈನ್ ಮುಗಿಸಿದವರು-47. 21 ಜನರ ಗಂಟಲು ದ್ರವ ಮತ್ತು ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗಾಗಲೇ 17 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಇದುವರೆಗೂ ಭಾರತದಲ್ಲಿ ಸುಮಾರು 2547 ಜನರಿಗೆ ಕೊರೋನಾ ಸೋಂಕು ಹರಡಿದ್ದು, ಸಾವಿನ ಸಂಖ್ಯೆ 62 ಮುಟ್ಟಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 393ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ 316, ಕೇರಳದಲ್ಲಿ 315, ದೆಹಲಿ 231, ರಾಜಸ್ಥಾನ 170, ತೆಲಂಗಾಣ 116 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆಯಾಗಿದ್ದು, ನಿನ್ನೆ ಒಂದೇ ದಿನ 18 ಹೊಸ ಕೇಸ್​ಗಳು ವರದಿಯಾಗಿವೆ. ಈವರೆಗೆ 4 ಜನ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

Comments are closed.