ಕರ್ನಾಟಕ

ಕೊರೊನಾ ಹಿನ್ನೆಲೆ ತಮ್ಮ ಕೆಲಸಗಾರರಿಗೆ ಕೈಲಾದಷ್ಟು ಸಹಾಯ ಮಾಡುತ್ತಿರುವ ಪ್ರಕಾಶ್ ರೈ

Pinterest LinkedIn Tumblr


ಬೆಂಗಳೂರು: ಕೊರೊನಾದಿಂದಾಗಿ ಆರ್ಥಿಕ ತುರ್ತು ಪರಿಸ್ಥಿತಿ ಎದುರಾಗಿದ್ದು, ಉಳ್ಳವರು ಬಡವರಿಗೆ ಹಾಗೂ ನಿರ್ಗತಿಕರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ನಟ ನಟಿಯರು ಸಹ ಇದಕ್ಕೆ ಕೈ ಜೋಡಿಸಿದ್ದು, ತಮ್ಮ ಕೆಲಸಗಾರರಿಗೆ ಹಾಗೂ ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ನಟ ಪ್ರಕಾಶ್ ರೈ ತಮ್ಮ ವೈಯಕ್ತಿಕ ಕೆಲಸಗಾರರಿಗೆ ಸಹಾಯ ಹಸ್ತ ಚಾಚಿದ್ದಾರೆ. ಅಲ್ಲದೆ ಅವರ ಕಷ್ಟಕ್ಕೆ ಸ್ಪಂದಿಸಿದ್ದಾರೆ.

ಕೊರೊನಾ ಮಹಾಮಾರಿ ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ್ದು, ಇಡೀ ದೇಶವೇ ತತ್ತರಿಸಿ ಹೋಗಿದೆ. ಹೀಗಾಗಿ ಸ್ಟಾರ್‍ಗಳು ಸಹಾಯ ಮಾಡಲು ಮುಂದಾಗಿದ್ದಾರೆ. ಸಂಸದೆ ನುಸ್ರತ್ ಜಹಾನ್ ಸಹ ಬಡವರಿಗೆ ಮಾಸ್ಕ್ ವಿತರಿಸುವ ಮೂಲಕ ಸಹಾಯ ಮಾಡಿದ್ದಾರೆ. ಅಲ್ಲದೆ ಇತ್ತೀಚೆಗೆ ಸಿನಿಮಾ ನಿರ್ಮಾಪಕರ ಸಂಘದಿಂದ ದಿನಗೂಲಿ ನೌಕರರಿಗಾಗಿ ಪರಿಹಾರ ನಿಧಿ ಸ್ಥಾಪಿಸಲಾಗಿದೆ ಎಂದು ಹೇಳಲಾಗಿತ್ತು. ಈ ಮೂಲಕ ಚಲನಚಿತ್ರದ ದಿನಗೂಲಿ ನೌಕರರಿಗೆ ಸಹಾಯ ಹಸ್ತ ಚಾಚಲು ನಿರ್ಮಾಪಕರ ಸಂಘ ಮುಂದಾಗಿತ್ತು. ಪರಿಹಾರ ನಿಧಿ ಸ್ಥಾಪಿಸಿ ಯಾರೂ ಬೇಕಾದರೂ ಈ ನಿಧಿಗೆ ಹಣ ಕಳುಹಿಸಬಹುದು. ಇದರಿಂದ ದಿನಗೂಲಿ ನೌಕರರಿಗೆ ಸಂಬಳ ನೀಡಲಾಗುವುದು ಎಂದು ಹೇಳಿತ್ತು. ಇದಕ್ಕೆ ಹೆಚ್ಚು ಜನ ಸ್ಪಂದಿಸಿದ್ದರು.

ನಟ ಪ್ರಕಾಶ್ ರೈ ಸಹ ತಮ್ಮ ಕೆಲಸಗಾರರಿಗೆ ಮೇ ತಿಂಗಳವರೆಗಿನ ಸಂಬಳವನ್ನು ಮುಂಗಡವಾಗಿ ಪಾವತಿಸಿರುವುದಾಗಿ ತಿಳಿಸಿದ್ದಾರೆ, ಈ ಕುರಿತು ಟ್ವೀಟ್ ಮಾಡಿರುವ ಅವರು, ಹ್ಯಾಶ್ ಟ್ಯಾಗ್‍ನೊಂದಿಗೆ ಜನತಾ ಕಫ್ರ್ಯೂ ಎಂದು ಬರೆದುಕೊಂಡು, ಇಂದು ನಾನು ಮಾಡಿರುವ ಕೆಲಸ ಜೀವನಕ್ಕೆ ನಾನು ಮರಳಿ ನೀಡುವಂತಹದ್ದಾಗಿದೆ. ಅಲ್ಲದೆ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕಿದೆ ಎಂದು ಬರೆದಿದ್ದಾರೆ. ಇದರೊಂದಿಗೆ ಇಂಗ್ಲಿಷ್‍ನಲ್ಲಿ ಬರೆದಿರುವ ಇಮೇಜ್‍ನ್ನು ಹಾಕಿದ್ದಾರೆ.

ನನ್ನ ಬಳಿ ಕಾಯ್ದಿರಿಸಿದ್ದ ಹಣವನ್ನು ನೋಡಿದೆ, ಈ ಹಣದಲ್ಲೇ ನನ್ನ ಫಾರ್ಮ್, ಮನೆ ಹಾಗೂ ಸಿನಿಮಾ ನಿರ್ಮಾಣದ ಕೆಲಸಗಾರರಿಗೆ ಮುಂಗಡವಾಗಿ ಸಂಬಳವನ್ನು ಪಾವತಿಸಿದೆ. ಅಲ್ಲದೆ ಫೌಂಡೇಷನ್ ಹಾಗೂ ವೈಯಕ್ತಿಕ ಕೆಲಸಗಾರರಿಗೆ ಮೇ ತಿಂಗಳವರೆಗೆ ಸಂಬಳ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಸೋಷಿಯಲ್ ಡಿಸ್ಟೆನ್ಸ್ ನಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿರುವ ನನ್ನ ಮೂರು ಸಿನಿಮಾಗಳ ದಿನಗೂಲಿ ಕೆಲಸಗಾರರಿಗೂ ಅರ್ಧದಷ್ಟಾದರೂ ಸಂಬಳ ನೀಡಬೇಕೆಂದು ನಿರ್ಧರಿಸಿದ್ದೇನೆ. ಇನ್ನೂ ಈ ಕೆಲಸ ಮಾಡಿಲ್ಲ, ಹಣದ ಅಗತ್ಯತೆ ನೋಡಿಕೊಂಡು ಕೊಡುತ್ತೇನೆ. ಈ ಪ್ರಕ್ರಿಯೆ ಮುಂದುವರಿಯಲಿದೆ. ನಿಮ್ಮಲ್ಲರಲ್ಲೂ ನಾನು ಬೇಡಿಕೊಳ್ಳುತ್ತೇನೆ, ಶಕ್ತಿ ಇದ್ದವರು ನಿಮ್ಮ ಹತ್ತಿರದಲ್ಲಿರುವವರಿಗೆ ಅಗತ್ಯವಿದ್ದರೆ ಸಹಾಯ ಮಾಡಿ. ಜೀವನಕ್ಕೆ ನಾವು ಮರಳಿ ಕೊಡುವ ಸಂದರ್ಭ ಇದಾಗಿದೆ. ಅಲ್ಲದೆ ನಾವೆಲ್ಲರೂ ಒಟ್ಟಾಗಿ ನಿಲ್ಲುವ ಸಮಯ ಇದಾಗಿದೆ ಎಂದು ಬರೆದುಕೊಂಡಿರುವ ಇಮೇಜ್‍ನ್ನು ಟ್ವೀಟ್ ಮಾಡಿದ್ದಾರೆ.

Comments are closed.