ಕರ್ನಾಟಕ

ಸ್ವಾತಂತ್ರ್ಯ ಹೋರಾಟಗಾರ ಎಚ್‌ಎಸ್‌ ದೊರೆಸ್ವಾಮಿ ಕುರಿತ ಹೇಳಿಕೆಗೆ ಬದ್ಧ: ಯತ್ನಾಳ್

Pinterest LinkedIn Tumblr

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌ ದೊರೆಸ್ವಾಮಿ ಕುರಿತಾದ ಹೇಳಿಕೆಗೆ ನಾನು ಬದ್ಧನಾಗಿದ್ದು ಯಾವುದೇ ಕಾರಣಕ್ಕೂ ಕ್ಷಮೆಯಾಚನೆ ಮಾಡುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಾವರ್ಕರ್ ಬಗ್ಗೆ ಕೀಳಾಗಿ ಮಾತನಾಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿರು.

ಹಿಂದುತ್ವದ ಬಗ್ಗೆ ಮಾತನಾಡಿದರೆ ನಾವು ಅಪರಾಧಿಗಳಾಗುತ್ತೇವೆ ಎಂದ ಯತ್ನಾಳ್ ಕಾಂಗ್ರೆಸ್ ದೇಶ ವಿರೋಧಿಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದರು.

ದೊರೆಸ್ವಾಮಿ ಕುರಿತಾಗಿ ನೀಡಿರುವ ಹೇಳಿಕೆಗೆ ನಾನು ಕ್ಷಮೆಯಾಚನೆ ಮಾಡುವುದಿಲ್ಲ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಸ್ವಾತಂತ್ರ ಹೋರಾಟಗಾರರಿಗೆ ಗೌರವ ಕೊಡುತ್ತೇನೆ ಆದರೆ ನಕಲಿ ಹೋರಾಟಗಾರರಿಗೆ ಬೆಂಬಲ ಕೊಡುವುದಿಲ್ಲ ಎಂದರು.

ಕಾಂಗ್ರೆಸ್ ಬಾಲಾಕೋಟ್‌ ಏರ್‌ಸ್ಟ್ರೈಕ್ ಹಾಗೂ ಸರ್ಜಿಕಲ್ ಸ್ಟ್ರೈಕ್‌ ಬಗ್ಗೆ ಸಾಕ್ಷಿ ಕೇಳುತ್ತದೆ, ಅದೇ ರೀತಿ ನಾನು ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಸಾಕ್ಷಿ ಕೇಳುತ್ತೇನೆ ಎಂದು ತನ್ನ ನಿಲುವನ್ನು ಸಮರ್ಥಿಸಿಕೊಂಡರು.

ಎಚ್‌.ಎಸ್ ದೊರೆಸ್ವಾಮಿ ನಕಲಿ ಸ್ವಾತಂತ್ರ ಹೋರಾಟಗಾರ ಹಾಗೂ ಪಾಕಿಸ್ತಾನದ ಏಜೆಂಟ್‌ ಎಂದು ಯತ್ನಾಳ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿದ್ದು ಕಾಂಗ್ರೆಸ್ ಯತ್ನಾಳ್ ಕ್ಷಮೆಯಾಚನೆಗೆ ಒತ್ತಾಯಿಸುತ್ತಿದೆ.

Comments are closed.