ಕರ್ನಾಟಕ

ಅಮೂಲ್ಯ ದೇಶದ್ರೋಹ ಪ್ರಕರಣ; ತನಿಖೆ ವೇಳೆ ಸತ್ಯ ಬೆಳಕಿಗೆ

Pinterest LinkedIn Tumblr


ಬೆಂಗಳೂರು (ಫೆ. 26): ಬೆಂಗಳೂರಿನ ಟೌನ್​ಹಾಲ್​ನಲ್ಲಿ ಹಿಂದೂಪರ ಸಂಘಟನೆಗಳು ನಡೆಸಿದ್ದ ಪ್ರತಿಭಟನೆಯಲ್ಲಿ ‘ಫ್ರೀ ಕಾಶ್ಮೀರ’ ನಾಮಫಲಕ ಪ್ರದರ್ಶಿಸಿ, ವಿವಾದಕ್ಕೀಡಾಗಿದ್ದ ಆರ್ದ್ರಾ ಕುರಿತ ವಿಚಾರಣೆಯಲ್ಲಿ ಅಚ್ಚರಿಯ ಸಂಗತಿ ಬಯಲಾಗಿದೆ. ‘ಪಾಕಿಸ್ತಾನ ಜಿಂದಾಬಾದ್​’ ಎಂದು ಘೋಷಣೆ ಕೂಗಿದ್ದ ಅಮೂಲ್ಯ ಮತ್ತು ಆರ್ದ್ರಾ ಇಬ್ಬರೂ ಒಂದೇ ರೂಮಿನಲ್ಲಿ ವಾಸವಾಗಿದ್ದರು ಎಂಬ ತನಿಖೆ ವೇಳೆ ಸತ್ಯ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಫ್ರೀಡಂಪಾರ್ಕ್​ನಲ್ಲಿ ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿ ಅಮೂಲ್ಯ ಲಿಯೋನ ಪಾಕಿಸ್ತಾನದ​ ಪರವಾಗಿ ಘೋಷಣೆ ಕೂಗಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. 19 ವರ್ಷದ ಅಮೂಲ್ಯಳನ್ನು ಕೂಡಲೇ ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದು, ರಾತ್ರೋರಾತ್ರಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ಆಕೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇದೀಗ ಈ ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆಗಾಗಿ ಆಕೆಯನ್ನು 4 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ.

ಅಮೂಲ್ಯ ‘ಪಾಕಿಸ್ತಾನ ಜಿಂದಾಬಾದ್​’ ಎಂದು ಘೋಷಣೆ ಕೂಗಿದ ಮಾರನೇ ದಿನ ಟೌನ್​ಹಾಲ್​ನಲ್ಲಿ ಅಮೂಲ್ಯಳ ದೇಶವಿರೋಧಿ ಘೋಷಣೆಯ ವಿರುದ್ಧ ನಡೆದ ಹಿಂದೂಪರ ಸಂಘಟನೆಗಳ ಪ್ರತಿಭಟನೆಯಲ್ಲಿ ಆರ್ದ್ರಾ ‘ಫ್ರೀ ಕಾಶ್ಮೀರ’ ನಾಮಫಲಕ ಪ್ರದರ್ಶಿಸಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಯ ಸದಸ್ಯರು ಆಕೆಗೆ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದರು.

ಇವರಿಬ್ಬರೂ ಮೊದಲೇ ಪರಿಚಿತರಾಗಿದ್ದು, ಬೆಂಗಳೂರಿನ ಪಿಜಿಯೊಂದರಲ್ಲಿ ರೂಂಮೇಟ್ಸ್​ ಆಗಿದ್ದರು ಎಂಬ ವಿಷಯ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಅಮೂಲ್ಯ ಮತ್ತು ಆರ್ದ್ರಾ 2019ರ ಸೆಪ್ಟೆಂಬರ್​ನಿಂದ ಜನವರಿಯವರೆಗೆ 3 ತಿಂಗಳ ಕಾಲ ಒಂದೇ ರೂಮಿನಲ್ಲಿ ವಾಸವಾಗಿದ್ದರು. ಜನವರಿ ಬಳಿಕ ಆರ್ದ್ರಾ ಬೇರೆ ಪಿಜಿಯಲ್ಲಿ ವಾಸವಾಗಿದ್ದಳು. ತಾನು ಅಮೂಲ್ಯ ಜೊತೆ ವಾಸವಾಗಿದ್ದ ವಿಚಾರವನ್ನು ಆರ್ದ್ರಾ ಪೊಲೀಸರಿಂದ ಮುಚ್ಚಿಟ್ಟಿದ್ದಳು. ಅಮೂಲ್ಯ ಕೂಡ ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ.

ಆದರೆ, ಅಮೂಲ್ಯ ಹಾಗೂ ಆರ್ದ್ರಾಳ ಸ್ನೇಹಿತರನ್ನು ವಿಚಾರಣೆ ನಡೆಸಿದಾಗ ಇವರಿಬ್ಬರ ನಡುವಿನ ಸಂಬಂಧ ಬಯಲಾಗಿದೆ. ಸದ್ಯಕ್ಕೆ ಇದೇ ಕಾರಣಕ್ಕಾಗಿ ಅಮೂಲ್ಯಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗ್ಗೆ ಪೊಲೀಸರು ಅಮೂಲ್ಯಳನ್ನು ಆಕೆಯ ಪಿಜಿ ಬಳಿ ಸ್ಥಳ ಮಹಜರಿಗೆ ಕರೆದೊಯ್ಯಲಿದ್ದಾರೆ. ಅಮೂಲ್ಯಳ ತನಿಖೆಯ ಪ್ರತಿ ಹೇಳಿಕೆಯ ವಿಡಿಯೋ ಮಾಡಲು ಪೊಲೀಸರು ಕ್ಯಾಮೆರಾ ತರಿಸಿಕೊಂಡಿದ್ದಾರೆ. ಈ ಬಗ್ಗೆ ಚಿಕ್ಕಪೇಟೆ ಎಸಿಪಿ ಮಹಾಂತೇಶ್ ರೆಡ್ಡಿ ತಂಡ ತನಿಖೆ ನಡೆಸುತ್ತಿದೆ.

Comments are closed.