ಕರ್ನಾಟಕ

ವಾಟ್ಸಪ್‍ಗೆ ಬಂದ ಫೋಟೋದಿಂದ ರದ್ದಾದ ಮದುವೆ

Pinterest LinkedIn Tumblr


ಬೆಂಗಳೂರು: ಲವ್ ಬ್ರೇಕಪ್ ಆಗಿದ್ದಕ್ಕೆ ಮಾಜಿ ಪ್ರಿಯಕರ ಯುವತಿಯ ಖಾಸಗಿ ಫೋಟೋಗಳನ್ನು ಶೇರ್ ಮಾಡಿ ಬ್ಲಾಕ್‍ಮೇಲ್ ಮಾಡುತ್ತಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಕೊಲ್ಕತ್ತ ಮೂಲದ ಯುವತಿಗೆ ಬೆಂಗಳೂರಲ್ಲಿ ಬ್ಲಾಕ್‍ಮೇಲ್ ಮಾಡಿರುವ ಆರೋಪ ಕೇಳಿ ಬಂದಿದೆ. ಸ್ಟಾಲೋನ್ ವುಡ್ ಎಂಬಾತ ಪ್ರೇಯಸಿಗೆ ಬ್ಲಾಕ್‍ಮೇಲ್ ಮಾಡುತ್ತಿದ್ದು, ಇದೀಗ ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಕುರಿತು ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ?
ಯುವತಿ ಕಳೆದ ಎರಡು ವರ್ಷಗಳಿಂದ ಕೊಲ್ಕತ್ತಾದ ರೆಸ್ಟೊರೆಂಟ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಈ ವೇಳೆ ಫೇಸ್‍ಬುಕ್ ಮೂಲಕ ಸ್ಟಾಲೋನ್ ವುಡ್ ಪರಿಯಚವಾಗಿದ್ದನು. ಪರಿಚಯ ಸ್ನೇಹವಾಗಿ ಇಬ್ಬರು ಪ್ರೀತಿಸುತ್ತಿದ್ದರು. ಇಬ್ಬರೂ ಸಹ ಚಾಟಿಂಗ್-ಡೇಟಿಂಗ್ ಎಂದು ಕಾಲ ಕಳೆಯುತ್ತಿದ್ದರು. ಸ್ಟಾಲೋನ್ ವುಡ್ ನಗ್ನ ಫೋಟೋಗಳನ್ನು ಕಳಿಸುವಂತೆ ಯುವತಿಯಲ್ಲಿ ಕೇಳಿಕೊಂಡಿದ್ದಾನೆ. ಹೇಗೂ ಪ್ರಿಯಕರ ಎಂದು ಯುವತಿ ತನ್ನ ಖಾಸಗಿ ಫೋಟೋಗಳನ್ನು ಪ್ರಿಯಕರಿಗೆ ಕಳುಹಿಸಿದ್ದಾಳೆ.

ಇತ್ತೀಚೆಗೆ ಯುವತಿ ಕೆಲಸ ಅರಸಿ ಕೊಲ್ಕತ್ತಾದಿಂದ ಬೆಂಗಳೂರಿಗೆ ಬಂದಿದ್ದಾಳೆ. ಈ ವೇಳೆ ಆರೋಪಿಯ ಜೊತೆ ಜಗಳವಾಗಿ ಲವ್ ಬ್ರೇಕಪ್ ಆಗಿದೆ. ಕೊಲ್ಕತ್ತಾದಲ್ಲಿ ಜೊತೆಯಲ್ಲಿ ಇರುವ ವೇಳೆ ಯುವತಿಯ ಅಶ್ಲೀಲ ಫೋಟೋಗಳನ್ನು ಆರೋಪಿ ಕ್ಲಿಕ್ಕಿಸಿಕೊಂಡಿದ್ದನು. ಲವ್ ಬ್ರೇಕಪ್ ಆಗಿದ್ದಕ್ಕೆ ಖಾಸಗಿ ಫೋಟೋಗಳನ್ನು ಶೇರ್ ಮಾಡುವುದಾಗಿ ಬ್ಲಾಕ್ ಮಾಡಿದ್ದಾನೆ. ಕೊನೆಗೆ ಯುವತಿಯ ಖಾಸಗಿ ಫೋಟೋಗಳನ್ನ ತನ್ನ ಬಾಸ್ ಇಕ್ಬಾಲ್ ಹಾಗೂ ಎಂಡಿ ಅರಿಂದಮ್ ಸರ್ಕಾರ್ ಎಂಬವರಿಗೆ ಶೇರ್ ಮಾಡಿದ್ದಾನೆ.

ಇತ್ತ ಯುವತಿಗೆ ಬೇರೆ ಹುಡುಗನ ಜೊತೆ ಮದುವೆ ನಿಶ್ಚಯವಾಗಿತ್ತು. ಆರೋಪಿಯ ಬಾಸ್ ಇಕ್ಬಾಲ್ ಯುವತಿಯ ಫೋಟೋವನ್ನು ನಿಶ್ಚಯವಾಗಿದ್ದ ಹುಡುಗನಿಗೆ ಶೇರ್ ಮಾಡಿದ್ದಾನೆ. ಹುಡುಗ ತನಗೆ ಬಂದ ಫೋಟೋ ನೋಡಿ ಮದುವೆ ಕ್ಯಾನ್ಸಲ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಸದ್ಯ ಮದುವೆಯೂ ಇಲ್ಲದೇ, ಬೆಂಗಳೂರಲ್ಲಿ ಕೆಲಸವೂ ಸಿಗದೇ ಯುವತಿ ಕಂಗಾಲಾಗಿದ್ದಾಳೆ. ಹೀಗಾಗಿ ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಕುರಿತು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.